ಹೊಸದಿಲ್ಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್ ಮೋದಿ ಅವರು ಲಂಡನ್‌ನಲ್ಲಿ ಪತ್ತೆಯಾಗಿರುವುದು ಮತ್ತು ಆತ 9 ಲಕ್ಷ ರೂಪಾಯಿ ಬೆಲೆ ಬಾಳುವ ಜಾಕೆಟ್ ತೊಟ್ಟ ವಿಡಿಯೋ ಮತ್ತು ಫೊಟೋ ಎಲ್ಲೆಡೆ ಹರಿದಾಡುತ್ತಿರುವಂತೆ ಈ ಕುರಿತಾಗಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾಲೆಳೆದಿದ್ದಾರೆ. ಈ ಕುರಿತಾಗಿ ಟ್ವೀಟ್ ಒಂದನ್ನು ಮಾಡಿರುವ ರಮ್ಯಾ ಅವರು,
‘ದುಬಾರಿ ಅಭಿರುಚಿಯನ್ನು ಹೊಂದಿರುವ ಸಮಾನಾಸಕ್ತ ಗೆಳೆಯರು’ ಎಂದು ಬರೆದು ನೀರವ್ ಮೋದಿ ಮತ್ತು ನರೇಂದ್ರ ಮೋದಿ ಇಬ್ಬರೂ ಬೆಲೆಬಾಳುವ ಸೂಟ್ ನಲ್ಲಿರುವ ಫೊಟೋಗಳನ್ನು ಹಾಕಿ
ಇಬ್ಬರ ಕೋಟ್ ಗಳ ಮೇಲೂ ‘ಪ್ರೈಸ್ ಟ್ಯಾಗ್’ ಅನ್ನು ಹಾಕಿದ್ದಾರೆ.
ಈ ಮೂಲಕ ಕಾವಲುಗಾರನ ಕೃಪಾಕಟಾಕ್ಷದಿಂದಲೇ ನೀರವ್ ಮೋದಿ ಅವರು ದೇಶ ಬಿಟ್ಟು ಹೋಗುವಂತಾದದ್ದು ಎಂಬ ಕಾಂಗ್ರೆಸ್ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಂತಾಗಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ನೂಲಿನ ಗೆರೆಗಳನ್ನು ಹೊಂದಿದ್ದ ದುಬಾರಿ ಬೆಲೆಯ ಸೂಟ್ ಅನ್ನು ತೊಟ್ಟು ವಿವಾದಕ್ಕೊಳಗಾಗಿದ್ದರು. ಒಟ್ಟಿನಲ್ಲಿ ಪ್ರಧಾನಮಂತ್ರಿ ಮತ್ತು ಬಿ.ಜೆ.ಪಿ. ವಿರುದ್ಧ ಸಮಯ ಸಿಕ್ಕಾಗಲೆಲ್ಲಾ ಟೀಕೆ ಮಾಡುವ ರಮ್ಯಾ ಅವರು ಇದೀಗ ನೀರವ್ ಮೋದಿ ಪ್ರಕರಣವನ್ನು ಬಳಸಿಕೊಂಡು ಪ್ರಧಾನಿಯವರ ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಇಂಗ್ಲೆಂಡ್ ಮೂಲದ ದಿ ಟೆಲಿಗ್ರಾಫ್ ಪತ್ರಿಕೆ ನೀರವ್ ಮೋದಿ ಇರುವಿಕೆ ಪತ್ತೆ ಹಚ್ಚಿದ್ದು, ಲಂಡನ್ ನಲ್ಲಿ 73 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾನೆ. ಪತ್ರಿಕೆ ಪ್ರಕಟಿಸಿದ ವಿಡಿಯೋದಲ್ಲಿ ವಿಶಿಷ್ಟ ಮೀಸೆ ಬಿಟ್ಟು, 9 ಲಕ್ಷ ಬೆಲೆ ಬಾಳುವ ಜಾಕೆಟ್ ತೊಟ್ಟಿದ್ದು ಕಾಣಿಸುತ್ತದೆ. ಸೆಂಟರ್ ಪಾಯಿಂಟ್ ಟವರ್ ಎಂಬ ಪ್ರತಿಷ್ಠಿತ 3 ಬೆಡ್‌ರೂಮ್‌ಗಳಿರುವ ಲಕ್ಷುರಿ ಅಪಾರ್ಟ್‌ಮೆಂಟ್‌ನಲ್ಲಿ ಈತ ವಾಸಿಸುತ್ತಿದ್ದಾನೆ. ಇದಕ್ಕೆ ತಿಂಗಳ ಬಾಡಿಗೆಯೇ 15 ಲಕ್ಷ ರೂ. ಆಗಿದೆ.