ರಚನಾ ಇಂದರ್ ನಾಯಕಿಯಾಗಿರುವ ಚಿತ್ರಗಳು ಒಂದರ ಹಿಂದೊಂದರಂತೆ ತೆರೆಕಾಣುತ್ತಿದೆ. ಕಳೆದ ತಿಂಗಳು ನಾಲ್ಕನೇ ಆಯಾಮ ಸಿನಿಮಾ ತೆರೆಕಂಡಿತ್ತು. ಈಗ ಮತ್ತೂಂದು ಹೊಸ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “4ಎನ್6′. ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಮೇ 10ರಂದು ತೆರೆಕಾಣುತ್ತಿದೆ.
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ, ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡದ ಮೊಗದಲ್ಲಿ ನಗು ಮೂಡಿದೆ.
ಈ ಚಿತ್ರವನ್ನು ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಬ್ಯಾನರ್‌ನಡಿ ಸಾಯಿಪ್ರೀತಿ ಎನ್ ನಿರ್ಮಿಸಿದ್ದಾರೆ. ದರ್ಶನ್ ಶ್ರೀನಿವಾಸ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಮರ್ಡರ್ ಮಿಸ್ಟರಿ, ಅದರ ಹಿಂದಿನ ನಿಗೂಢ ಹುಡುಕಾಟದ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಮಹತ್ವವಿದೆ. ಕೊಲೆ ಪ್ರಕರಣ ಪತ್ತೆ ಹಚ್ಚುವಲ್ಲಿ ಫೋರೆನ್ಸಿಕ್ ರಿಪೋರ್ಟ್ ಮುಖ್ಯ ಆಗಿರುತ್ತದೆ. 4 ಪ್ರಮುಖ ಪಾತ್ರಗಳ ಸುತ್ತ ಕಥೆ ನಡೆಯುತ್ತದೆ. ಕಥೆ ಮಾಡುವಾಗ ಫೋರೆನ್ಸಿಕ್ ತಜ್ಞರ ಸಲಹೆ ತೆಗೆದು ಕೊಂಡೆ. ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30 ದಿನ ಚಿತ್ರೀಕರಿಸಲಾಗಿದ್ದು, ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ನಿರ್ದೇಶಕ ದರ್ಶನ್ ಮಾತು.
ರಚನಾ ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “4ಎನ್6 ನನ್ನ ಕೆರಿಯರ್‌ನಲ್ಲಿ ತುಂಬಾ ವಿಭಿನ್ನವಾದ ಸಿನಿಮಾ. ಇಲ್ಲಿ ನಾನು ನಯಿಷಾ ಎಂಬ ಡಿಟೆಕ್ಟಿವ್ ಪಾತ್ರ ಮಾಡಿದ್ದೇನೆ. ಇಲ್ಲಿ 4 ಮತ್ತು 6ರ ಮಧ್ಯೆ ಒಂದು ಸಂಬಂಧ ವಿದೆ. ಅದೇನು ಎಂಬುದು ಸಿನಿಮಾದ ಕುತೂಹಲದ ಅಂಶ. ಇಲ್ಲಿ ನನ್ನ ಪಾತ್ರಕ್ಕೆ ಮಾತು ಕಮ್ಮಿ. ಆದರೆ, ಎಲ್ಲವನ್ನು ಎಕ್ಸ್‌ಪ್ರೆಶನ್ ಮೂಲಕ ತೋರಿಸಬೇಕಿತ್ತು’ ಎನ್ನುತ್ತಾರೆ ರಚನಾ.
“ಏನೋ ಒಂದು ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ನಾವು ಮಾಡಿಲ್ಲ. ನೀಟಾದ ಪ್ಲ್ರಾನ್ ಮಾಡಿಕೊಂಡೇ ಈ ಸಿನಿಮಾ ಮಾಡಿದ್ದೇವೆ. ಇವತ್ತು ಕನ್ನಡ ಸಿನಿಮಾವನ್ನು ಜನ ನೋಡಬೇಕಾದರೆ ಅದರಲ್ಲಿನ ಕಂಟೆಂಟ್ ಹೇಗಿದೆ ಅನ್ನೋದು ಮುಖ್ಯವಾಗುತ್ತದೆ. ನಾವು ಆ ನಿಟ್ಟಿನಲ್ಲಿ ಹೆಚ್ಚಿನ ಗಮನಹಿಸಿದ್ದೇವೆ’ ಎನ್ನುವುದು ತಂಡದ ಮಾತು.