ಮುಂಬೈ: ಬಾಲಿವುಡ್ ನ ಕಂದು ಕಂಗಣ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಬುಧವಾರ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಆಯಾನ್, ಬರಾಸತ್ ಹಾಗೂ ದೀದಾರ್ ನಂತಹ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಟಾರ್ ಪಟ್ಟ ಪಡೆದಿದ್ದರು. ಉಸಿರಾಟದ ತೊಂದರೆಯಿಂದ ನಿಮ್ಮಿ ಅವರನ್ನು ಜುಹೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಗುರುವಾರ ಮಧ್ಯಾಹ್ನ ಮುಂಬೈನ ರೇಯಾ ರಸ್ತೆಯಲ್ಲಿರುವ ಶವಾಗಾರದಲ್ಲಿ ಎಲ್ಲಾ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ವಿವರಿಸಿದೆ.
ನಟಿ ಮೂಲ ಹೆಸರು ನವಾಬ್ ಬಾನೂ ಬಾಲಿವುಡ್ ನಲ್ಲಿ ದಂತಕಥೆ ಎಂದು ಹೆಸರಾಗಿದ್ದ ರಾಜ್ ಕಪೂರ್ ಅವರು “ನಿಮ್ಮಿ” ಎಂದು ಮರು ನಾಮಕರಣ ಮಾಡಿದ್ದರು. ನಿಮ್ಮಿ ಮೊದಲ ಸಿನಿಮಾ ಅಂದಾಜ್.
1949ರಲ್ಲಿ ಬಿಡುಗಡೆಯಾಗಿದ್ದ ಬರಾಸತ್ ಸಿನಿಮಾದಲ್ಲಿ ನಿಮ್ಮಿ ಹೀರೋಯಿನ್ ಆಗಿದ್ದರು. ಈ ಸಿನಿಮಾದಲ್ಲಿನ ಮೂರು ಹಾಡುಗಳು ಅತ್ಯಂತ ಜನಪ್ರಿಯವಾಗಿದ್ದವು. ಬರಾಸತ್ ಸಿನಿಮಾದ ಯಶಸ್ಸಿನ ನಂತರ ನಿಮ್ಮಿ ಸಿನಿಪಯಣದಲ್ಲಿ ಹಿಂದೆ ನೋಡಿಲ್ಲ. ಸ್ಟಾರ್ ಪಟ್ಟದೊಂದಿಗೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.