ಕನ್ನಡದಲ್ಲಿ “ಗಜ’, “ನಂ ಯಜಮಾನ್ರು’, “ದೃಶ್ಯ’ ಮೊದಲಾದ ಚಿತ್ರಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದ ಮಲೆಯಾಳಿ ಚೆಲುವೆ ನವ್ಯಾ ನಾಯರ್ ಈಗ ತಮ್ಮ ಜೀವನಕಥೆಯನ್ನು ಕೃತಿ ರೂಪದಲ್ಲಿ ಓದುಗರ ಮುಂದೆ ತಂದಿದ್ದಾರೆ. ಹೌದು, ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನವ್ಯಾ ನಾಯರ್, ತಮ್ಮ ಚಿತ್ರರಂಗದ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿ ಆತ್ಮಕಥನ ರಚಿಸಿದ್ದರು.
ಮಲಯಾಳಂನಲ್ಲಿ ನವ್ಯಾ ಬರೆದ “ನವ್ಯ ರಸಂಗಳ್’ ಕೃತಿ ಈಗ ಕನ್ನಡಕ್ಕೆ ಅನುವಾದಗೊಂಡು “ಧನ್ಯ ವೀಣಾ’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಇದೇ ವೇಳೆ ಮಾತನಾಡಿದ ನವ್ಯಾ ನಾಯರ್ “ಕನ್ನಡ ಚಿತ್ರರಂಗದ ಬಗ್ಗೆ ನನಗೆ ಒಳ್ಳೇ ಅನುಭವಗಳಿವೆ. ಇಲ್ಲಿ ಉತ್ತಮ ವಾತಾವರಣವಿದೆ. ಕನ್ನಡದಲ್ಲಿ ದರ್ಶನ್, ಶಿವರಾಜಕುಮಾರ್, ರವಿಚಂದ್ರನ್ ಮೊದಲಾದ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದೇನೆ.
ಇದನ್ನೂ ಓದಿ:ಮೊದಲ ತಮಿಳು ಚಿತ್ರದ ಶೂಟಿಂಗ್‌ನಲ್ಲಿ ನೀನಾಸಂ ಸತೀಶ್
ಉತ್ತಮ ಅವಕಾಶಗಳು ಬಂದರೆ ಕನ್ನಡದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೇನೆ. ಇದು ಆತ್ಮಕಥನವಲ್ಲ, ನನ್ನ ಕಲಾಜೀವನದ ಅನುಭವಗಳನ್ನು ಅಕ್ಷರ ರೂಪಕ್ಕಿಳಿಸಿದ್ದೇನೆ ಅಷ್ಟೇ’ ಎಂದರು.
ಇನ್ನು ಸುಮಾರು 8 ವರ್ಷಗಳ ಗ್ಯಾಪ್ ನಂತರ ಮತ್ತೆ ನವ್ಯಾ ನಾಯರ್ “ಉರುಪಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. “ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ನಾಯಕಿ ಪ್ರಧಾನ ಕಥಾನಕ ಒಳಗೊಂಡಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಚಿತ್ರ ತೆರೆಗೆ ಬರಲಿದೆ’ ಎಂದಿದ್ದಾರೆ ನವ್ಯಾ ನಾಯರ್.