ಕೊಲ್ಕತ್ತಾ : ಕೋವಿಡ್ ನಕಲಿ ಲಸಿಕೆ ಪಡೆದಿದ್ದ ನಟಿ ಹಾಗೂ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವರದಿಯಾಗಿದೆ.
ನಾಲ್ಕು ದಿನಗಳ ಹಿಂದೆ ಚಕ್ರವರ್ತಿ ಕೊರೊನಾ ಲಸಿಕೆ ಪಡೆದಿದ್ದರು. ಇವರು ಲಸಿಕೆ ಪಡೆದ ನಂತರ ಅದು ನಕಲಿ ಲಸಿಕಾ ಕೇಂದ್ರ ಎಂಬುದು ತಿಳಿದು ಬಂದಿದೆ. ಈ ಹಗರಣ ಬೆಳಕಿಗೆ ಬರುತ್ತಿದ್ದಂತೆ ಓರ್ವನನ್ನು ಬಂಧಿಸಲಾಗಿತ್ತು.
ಲಸಿಕೆ ಪಡೆದ ನಾಲ್ಕು ದಿನಗಳ ನಂತರ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ನಕಲಿ ಲಸಿಕೆಯೇ ಕಾರಣವೆಂದು ತಕ್ಷಣಕ್ಕೆ ಹೇಳಲು ಸಾಧ್ಯವಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ.
ಚಕ್ರವರ್ತಿ, ಡಿಹೈಡ್ರೇಷನ್ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದರು ಮತ್ತು ರಕ್ತದೊತ್ತಡ ಕಡಿಮೆಯಾಗಿದೆ ಎಂದು ಕುಟುಂಬದ ಆಪ್ತ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. ಸದ್ಯ ಮಿಮಿ ಚಕ್ರವರ್ತಿ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಇನ್ನು ನಕಲಿ ಲಸಿಕೆ ಮಾರಾಟ ಮಾಡುತ್ತಿದ್ದ ಅನೇಕರನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ. “ಇತ್ತೀಚಿಗೆ ನಡೆಸಿದ ಲಸಿಕೆ ಕ್ಯಾಂಪ್ ಗೆ ಮಿಮಿ ಚಕ್ರವರ್ತಿಯನ್ನು ಆಹ್ವಾನ ಮಾಡಲಾಗಿತ್ತು. ಅಲ್ಲಿ ಲಸಿಕೆ ಪಡೆಯುವಂತೆ ಚಕ್ರವರ್ತಿ ಜನರನ್ನು ಉತ್ತೇಜಿಸಿಸಿದ್ದರು” ಎಂದು ಟಿಎಂಸಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.