ಕೋಲ್ಕತ್ತಾ: ನಕಲಿ ಕೋವಿಡ್ ಲಸಿಕೆ ಕೇಂದ್ರ ಆರಂಭಿಸಿದ ವ್ಯಕ್ತಿಯೋರ್ವ ಸಾವಿರಾರು ಜನರಿಗೆ ಉಚಿತ ಕೋವಿಡ್ ಲಸಿಕೆ ಕೊಡಿಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಟಿ, ಸಂಸದೆ ಮಿಮಿ ಚಕ್ರವರ್ತಿ ಅವರು ಅದೇ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ಬಳಿಕ ಈ ನಕಲಿ ಕೇಂದ್ರವು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಕೋಲ್ಕತ್ತಾ ಮಹಾನಗರ ಪಾಲಿಕೆಯ ಸಹ ಆಯುಕ್ತ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ಉಚಿತವಾಗಿ ಲಸಿಕೆ ನೀಡುವ ಕ್ಯಾಂಪ್ ಆಯೋಜನೆ ಮಾಡಿದ್ದ. ಅನುಮತಿ ರಹಿತವಾಗಿ ನಡೆಸುತ್ತಿದ್ದ ಈ ಕ್ಯಾಂಪ್ ನಲ್ಲಿ ಸಾಕಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಮೊದಲ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿತೆ ಸಾವು
ಸಂಸದೆ ಮಿಮಿ ಚಕ್ರವರ್ತಿ ಕೂಡಾ ಇದೇ ಕೇಂದ್ರದಲ್ಲಿ ಲಸಿಕೆ ಪಡೆದಿದ್ದರು. ಆದರೆ ಲಸಿಕೆ ಪಡೆದ ಬಳಿಕ ಯಾವುದೇ ದೃಢೀಕರಣ ಸಂದೇಶ ಬಾರದ ಕಾರಣ ಅನುಮಾನಗೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದರು. ಹೀಗಾಗಿ ವಿಚಾರ ಬೆಳಕಿಗೆ ಬಂದಿದೆ. ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಆತನ ಕೇಂದ್ರದಲ್ಲಿ ನೀಡುತ್ತಿದ್ದ ಲಸಿಕೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ನೈಜತೆಯ ಬಗ್ಗೆ ಸಂಶಯವಿದೆ. ಒಂದು ವೇಳೆ ನಕಲಿ ಲಸಿಕೆ ನೀಡಲಾಗಿದ್ದಲ್ಲಿ ಅಲ್ಲಿ ಲಸಿಕೆ ಪಡೆದುಕೊಂಡವರಿಗೆ ಮತ್ತೊಮ್ಮೆ ಅಸಲಿ ಲಸಿಕೆ ನೀಡಲಾಗುವುದು ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.