ಅದು 1993. “ಅಣ್ಣಯ್ಯ’ ಚಿತ್ರದ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರೇಟ್ ಎನಿಸಿಕೊಂಡಿದ್ದ ಬಾಲಿವುಡ್ ನಟಿ ಮಧುಬಾಲ, ಆ ಬಳಿಕ ಕನ್ನಡದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. “ಟೈಮ್ ಬಾಂಬ್’ ಎಂಬ ಚಿತ್ರ ಮಾಡಿದ್ದು ಬಿಟ್ಟರೆ, ಅತ್ತ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿ ಚಿತ್ರರಂಗದಲ್ಲಿ ಬಿಝಿಯಾಗಿಬಿಟ್ಟರು. ಅದೆಷ್ಟೋ ವರ್ಷಗಳ ಬಳಿಕ ಮಧುಬಾಲ ಪುನಃ ಕನ್ನಡ ಚಿತ್ರರಂಗದತ್ತ ಮುಖ ಮಾಡಿದರು. ಅದು “ರನ್ನ’ ಚಿತ್ರದ ಮೂಲಕ. ಅದಾಗಿ ಒಂದಷ್ಟು ಅನ್ಯ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದ ಮಧುಬಾಲ, ಪುನಃ ಕನ್ನಡಕ್ಕೆ ಬಂದು ಹೋಗಿ ಮಾಡುತ್ತಿದ್ದಾರೆ. ಈಗ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಮೂಲಕ
ಮತ್ತೆ ಬಂದಿದ್ದಾರೆ. ಹೌದು, ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡುತ್ತಿದ್ದಾರೆ ಮಧುಬಾಲ. ಈ ಚಿತ್ರ ಸೇರಿದಂತೆ ಕನ್ನಡದಲ್ಲಿ ಸುಮಾರು ಆರೇಳು ಚಿತ್ರಗಳಲ್ಲಿ ನಟಿಸಿರುವ ಕುರಿತು ಹೇಳುವ ಮಧುಬಾಲ, “ಅಣ್ಣಯ್ಯ’ ಚಿತ್ರ ಇಂದಿಗೂ ನನ್ನನ್ನು ಕನ್ನಡದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಅಪರೂಪದ ಚಿತ್ರ’ ಎಂದು ಬಣ್ಣಿಸುತ್ತಾರೆ.
“ರನ್ನ’ ಬಳಿಕ ಕಂಬ್ಯಾಕ್ ಆದ ನನಗೆ ಹೊಸ ಬಗೆಯ ಪಾತ್ರಗಳು ಹುಡುಕಿ ಬರುತ್ತಿರುವುದು ಖುಷಿ ಕೊಟ್ಟಿದೆ. “ರನ್ನ’ ಚಿತ್ರದಲ್ಲೂ ನಾನು ತಾಯಿ ಪಾತ್ರ ನಿರ್ವಹಿಸಿದೆ. “ಸೀತಾರಾಮ ಕಲ್ಯಾಣ’ ಚಿತ್ರದಲ್ಲೊಂದು ವಿಶೇಷ ಪಾತ್ರ ಮಾಡಿದ್ದೇನೆ. ‘ನಾನು ಮತ್ತು ವರಲಕ್ಷ್ಮೀ’ ಚಿತ್ರದಲ್ಲೂ ತಾಯಿಯಾಗಿ ನಟಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಧುಬಾಲ, ನನಗೆ ತೆಲುಗು, ತಮಿಳು, ಮಲಯಾಲಳಂ ಮತ್ತು ಹಿಂದಿಯಲ್ಲೂ ಅವಕಾಶ ಸಿಗುತ್ತಿವೆಯಾದರೂ, ಕನ್ನಡದಲ್ಲಿ ಸಿಗುತ್ತಿರುವ ಪಾತ್ರಗಳ ಬಗ್ಗೆ ಖುಷಿ ಇದೆ ಎನ್ನುತ್ತಾರೆ. ಈಗ ಕನ್ನಡದಲ್ಲಿ ಸಿಗುತ್ತಿರುವ ಪಾತ್ರಗಳು ಹುಡುಕಿ ಬಂದರೆ, ಖಂಡಿತ ಇಲ್ಲಿ ಎಷ್ಟು ಸಿನಿಮಾ ಬೇಕಾದರೂ ಮಾಡುತ್ತೇನೆ’ ಎಂದು ಹೇಳುತ್ತಾರೆ ಮಧುಬಾಲ.
“ಪ್ರೀಮಿಯರ್ ಪದ್ಮಿನಿ’ ಚಿತ್ರದ ಕುರಿತು ಹೇಳುವ ಮಧುಬಾಲ, ಈ ಚಿತ್ರದಲ್ಲಿ ವಿವಾಹಿತ ಮಹಿಳೆ ಪಾತ್ರ ಸಿಕ್ಕಿದೆ. ತುಂಬಾ ಚೆನ್ನಾಗಿ ಬದುಕುವ ಗಂಡ, ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿ, ಅದು ವಿಚ್ಛೇದನಕ್ಕೂ ಹೋದಾಗ, ಅವಳಲ್ಲಾಗುವ ತಳಮಳ, ಗೊಂದಲವನ್ನು
ಚೆನ್ನಾಗಿ ಕಟ್ಟಿಕೊಡಲಾಗಿದೆ. ಅದೇ ಚಿತ್ರದ ವಿಶೇಷ. ಇನ್ನು, “ಸೀತಾರಾಮ ಕಲ್ಯಾಣ’ ಚಿತ್ರದಲ್ಲೂ ಒಳ್ಳೆಯ ಪಾತ್ರವಿದೆ. ಬಿಗ್ ಬಜೆಟ್, ದೊಡ್ಡ ತಾರಾಬಳಗದ ಜೊತೆ ಕೆಲಸ ಎಲ್ಲವೂ ಖುಷಿಕೊಟ್ಟಿದೆ ಎನ್ನುತ್ತಾರೆ.
ಹಿಂದಿಯಲ್ಲೂ ನಟನೆ ಮುಂದುವರೆದಿದ್ದು, ಇತ್ತೀಚೆಗೆ ಹಿಂದಿಯಲ್ಲಿ “ಸಬ್ ಕು ಟೀಕ್ ಹೈ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದೆ. ಆ ಕಿರುಚಿತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ನನಗೆ ಈಗ ಆ ರೀತಿಯ ಹೊಸ ಪ್ರಯೋಗ, ಪ್ರಯತ್ನ ಇಷ್ಟ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಮಧುಬಾಲ.