ನಟಿ ಹಿತಾ ಚಂದ್ರಶೇಖರ್ ಹಸೆಮಣೆ ಏರಲು ತಯಾರಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ರೆ ಹಿತಾ ನಿಜವಾಗಿಯೂ ಹಸೆಮಣೆ ಏರುವ ಮುಂಚೆಯೇ ಮದುಮಗಳ ಗೆಟಪ್‌ನಲ್ಲಿ ಬಿಗ್‌ಸ್ಕ್ರೀನ್ ಮೇಲೆ ಎಂಟ್ರಿ ಕೊಡಲಿದ್ದಾರೆ. ಹೌದು, ಹಿತಾ ಚಂದ್ರಶೇಖರ್ ಇನ್ನೂ ಹೆಸರಿಡದ ತಮ್ಮ ಮುಂಬರುವ ಚಿತ್ರದಲ್ಲಿ ಮದುಮಗಳ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಈಗಾಗಲೇ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್.ಜಿ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಹಿತಾ ಅವರಿಗೆ ಸಿದ್ಧಾರ್ಥ್ ಮಾಧ್ಯಮಿಕ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ಉಳಿದಂತೆ ಮೇಘನಾ ಗಾಂವ್ಕರ್, ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಜುಲೈ ಮೊದಲ ವಾರದಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಲಿದೆ.
ಇನ್ನು ಈ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ಮಾತನಾಡುವ ಹಿತಾ, “ಈ ಚಿತ್ರದಲ್ಲಿ ನನ್ನದು
ಮದುವೆಯ ಹೆಣ್ಣಿನ ಪಾತ್ರ. ಮದುವೆಯ ಬಗ್ಗೆ ತುಂಬ ಕನಸುಗಳನ್ನು ಕಟ್ಟಿಕೊಂಡಿರುವ, ಒಂಥರಾ ಪಾಪದ ಆದ್ರೆ ಚುರುಕಾಗಿರುವ ಹುಡುಗಿ ಆಗಿ ಕಾಣಿಸಿಕೊಂಡಿದ್ದೇನೆ. ಮನೆಯಲ್ಲಿ ತುಂಬಾ ಮುದ್ದಾಗಿ ಬೆಳೆಸಿದ ಹುಡುಗಿ ಪಾತ್ರ. ನನ್ನ ರಿಯಲ್ ಲೈಫ್ಗಿಂತ ತುಂಬಾ ವಿಭಿನ್ನ ಪಾತ್ರ ಇದಾಗಿದೆ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಎರಡೂ ಇಷ್ಟವಾಗಿದ್ದರಿಂದ ಈ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಒಂದು ಮದುವೆಯಲ್ಲೆ ಏನೇನೋ ನಡೆಯುತ್ತಿರುತ್ತದೆಯೊ, ಅದೇ ಸನ್ನಿವೇಶಗಳು ಅದೇ ಥರ ಪಾತ್ರಗಳು ಈ ಚಿತ್ರದಲ್ಲೂ ಇವೆ’ ಎನ್ನುವ ವಿವರಣೆ ಕೊಡುತ್ತಾರೆ.
ಅಂದಹಾಗೆ, ಈ ಚಿತ್ರದಲ್ಲಿ ಒಂದು ಮದುವೆ ಮನೆಯಲ್ಲಿ ನಡೆ ಯುವ ಕಥೆಯಿದ್ದು, ಹಿಂದಿನ ದಿನದ ರಿಸೆಪ್ಷನ್ ನಿಂದ ಬೆಳಿಗ್ಗೆ ಮದುವೆಯವರೆಗೆ ಏನೇನೂ ನಡೆಯುತ್ತದೆ ಅನ್ನೋದರ ಸುತ್ತ ಚಿತ್ರ ನಡೆಯಲಿದೆಯಂತೆ. ಇನ್ನು ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಸಂಗೀತ, ರಾಕೇಶ್ ಛಾಯಾಗ್ರಹಣವಿದೆ. ಸದ್ಯ ಈ ಚಿತ್ರದ ಪ್ರೊಡಕ್ಷನ್ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ಡಿಸೆಂಬರ್ ಅಥವಾ ಮುಂದಿನ ಜನವರಿ ವೇಳೆಗೆ ಮದುಮಗಳ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದು ಗ್ಯಾರೆಂಟಿ ಎನ್ನುತ್ತಾರೆ ಹಿತಾ ಚಂದ್ರಶೇಖರ್.