ಬೆಂಗಳೂರು: ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರ ನಿಶ್ಚಿತಾರ್ಥ ಭಾನುವಾರ ನಗರದ ಲೀಲಾ ಪ್ಯಾಲೇಸ್ ಹೊಟೇಲ್‌ನಲ್ಲಿ ಅದ್ದೂರಿಯಾಗಿ ಗಣ್ಯರು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯುತ್ತಿದೆ.
ಎರಡೂ ಕುಟುಂಬ ಹಾಗೂ ಆಪ್ತ ವರ್ಗದ ಸಮ್ಮುಖದಲ್ಲಿ ಚಿರು ಹಾಗೂ ಮೇಘನಾ ರಾಜ್ ಅವರ ನಿಶ್ಚಿತಾರ್ಥ ನಡೆಯುತ್ತಿದೆ.
ವರ ಚಿರಂಜೀವಿ,ಸಹೋದರ ಧ್ರುವ ಸೇರಿದಂತೆ ಅರ್ಜುನ್ ಸರ್ಜಾ ಕುಟುಂಬ ಸದಸ್ಯರು ಮೇಘನಾ ರಾಜ್ ಅವರ ನಿವಾಸಕ್ಕೆ ಆಗಮಿಸಿ ನಿಶ್ಚಿತಾರ್ಥ ಸಂಪ್ರದಾಯಗಳನ್ನು ನೇರವೇರಿಸಿದ್ದಾರೆ. ತಾಂಬೂಲ ಬದಲಾವಣೆ ಸೇರಿದಂತೆ ವಿವಿಧ ಸಂಪ್ರದಾಯಗಳು ಪುರೋಹಿತರ ನೇತೃತ್ವದಲ್ಲಿ ನಡೆದಿವೆ.
ಸಂಜೆ ಲೀಲಾ ಪ್ಯಾಲೇಸ್‌ನಲ್ಲಿ ನಡೆಯುವ ಸಮಾರಂಭಕ್ಕೆ ಚಿತ್ರರಂಗದ ಕೆಲ ಗಣ್ಯರು ಮತ್ತು ಕುಟುಂಬ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಆಮಂತ್ರಿಸಿರುವ ಬಗ್ಗೆ ವರದಿಯಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್, ಜಗ್ಗೇಶ್‌ಸೇರಿದಂತೆ ಸ್ಯಾಂಡಲ್‌ವುಡ್‌ನ ಯುವ ನಟ , ನಟಿಯರು ಮಾತ್ರವಲ್ಲದೆ ಮಲಾಯಳಂ ಚಿತ್ರರಂಗದ ಕೆಲ ಗಣ್ಯರು ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಔತಣಕ್ಕಾಗಿ ವಿವಿಧ ಬಗೆಯ ಖಾದ್ಯಗಳನ್ನು ಸಿದ್ದಪಡಿಸಲಾಗುತ್ತಿದೆ. ವಿವಾಹ ಡಿಸೆಂಬರ್ 6 ರಂದು ನಡೆಯಲಿದೆ ಎಂದು ಹೇಳಲಾಗಿದೆ.
ಕನ್ನಡದ ಚಿತ್ರರಂಗದ ಹಿರಿಯ ಕಲಾವಿದರಾದ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಪುತ್ರಿಯಾಗಿರುವ ಮೇಘನಾ ರಾಜ್, ಕನ್ನಡ, ಮಲಯಾಳಂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಕೂಡಾ “ವಾಯುಪುತ್ರ’ ಚಿತ್ರ ಮೂಲಕ ಎಂಟ್ರಿಕೊಟ್ಟು, ಇಲ್ಲಿವರೆಗೆ ಅನೇಕ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಚಿರು ಹಾಗೂ ಮೇಘನಾ “ಆಟಗಾರ’ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.