ನಟಿ ಅಪೇಕ್ಷಾ ಪುರೋಹಿತ್ ಈಗ ಅಪೇಕ್ಷಾ ಒಡೆಯರ್ ಆಗಿರುವುದು ಎಲ್ಲರಿಗೂ ಗೊತ್ತು. ನಿರ್ದೇಶಕ ಪವನ್ ಒಡೆಯರ್ ಅವರನ್ನು ವಿವಾಹ ಆದ ನಂತರ ಅವರು ಚಿತ್ರಗಳಲ್ಲಿ ಮಾಡುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆದರೆ, ಅಪೇಕ್ಷಾ ಒಡೆಯರ್ ಮಾತ್ರ, ಸಿನೆಮಾ ನಾಯಕಿ ಆಗದಿದ್ದರೂ, ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಚಟುವಟಿಕೆಗಳಲ್ಲಿ ಕೆಲಸ ಮಾಡುವ ಯೋಚನೆ ಹೊಂದಿದ್ದಾರೆ. ಅಂದಹಾಗೆ, ಅಪೇಕ್ಷಾ ಒಡೆಯರ್ ಟಿ.ಎನ್.ಸೀತಾರಾಮ್ ನಿರ್ದೇಶನದ ಕಾಫಿತೋಟ ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ ಯಾವ ಚಿತ್ರ ಒಪ್ಪಿಕೊಂಡರು ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಸಾಗುತ ದೂರ ದೂರ ಎಂಬ ಚಿತ್ರದಲ್ಲಿ ಅಪೇಕ್ಷಾ ಒಡೆಯರ್ ಸದ್ದಿಲ್ಲದೆಯೇ ನಟಿಸಿದ್ದಾರೆ. ವಿಶೇಷ ಅಂದರೆ, ಈ ಚಿತ್ರ ಪೂರ್ಣಗೊಂಡಿದ್ದು, ಇನ್ನೇನು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದೆ.
ಅಪೇಕ್ಷಾ ಒಡೆಯರ್‌ಗೆ ಸಾಗುತ ದೂರ ದೂರ ಮೂರನೇ ಚಿತ್ರ. ಈ ಚಿತ್ರಕ್ಕೆ ರವಿತೇಜ ನಿರ್ದೇಶಕರು. ಈ ಹಿಂದೆ ಜಾತ್ರೆ ಸಿನೆಮಾ ನಿರ್ದೇಶಿಸಿದ್ದ ರವಿತೇಜ ಈಗ ತಾಯಿ ಸೆಂಟಿ ಮೆಂಟ್ ಕುರಿತ ಸಾಗುತ ದೂರ ದೂರ ಚಿತ್ರ ಮಾಡಿದ್ದಾರೆ. ಇನ್ನು, ಈ ಚಿತ್ರ ಕೃಷಿ ಕನಸು ಬ್ಯಾನರ್‌ನಲ್ಲಿ ಅಮಿತ್ ಪೂಜಾರಿ ನಿರ್ಮಾಣ ಮಾಡಿದ್ದಾರೆ. ಅಪೇಕ್ಷಾ ಒಡೆಯರ್ ಅಭಿನಯದ ಸಾಗುತ ದೂರ ದೂರ ಚಿತ್ರದಲ್ಲಿ ಅವರ ಪಾತ್ರವೇ ಮುಖ್ಯ ಆಕರ್ಷಣೆ. ಚಿತ್ರದಲ್ಲಿ ಪ್ರೀತಿ- ಪ್ರೇಮ ಇಲ್ಲ. ಮರಸುತ್ತುವ ಹಾಡುಗಳಿಲ್ಲ. ಆದರೆ, ಎದೆಭಾರ ಎನಿಸುವ ಅಮ್ಮನ ಸೆಂಟಿಮೆಂಟ್ ಕಥೆ ಇದೆ. ಅದೊಂದು ಜರ್ನಿ ಕಥೆಯಾಗಿದ್ದು, ಅಪೇಕ್ಷಾ ಮತ್ತು ಇನ್ನೊಬ್ಬ ಚಿಕ್ಕ ಹುಡುಗನ ನಡುವಿನ ಕಥೆ ಚಿತ್ರದಲ್ಲಿದೆ. ಕಥೆಯ ಜರ್ನಿಯಲ್ಲಿ ಇಬ್ಬರೂ ತಮ್ಮ ತಾಯಿಯನ್ನು ಹುಡುಕಿ ಹೋಗುವ ಪಾತ್ರದಲ್ಲಿ ಅಪೇಕ್ಷಾ ಕಾಣಿಸಿಕೊಂಡಿದ್ದಾರಂತೆ.
ಸಾಗುತ ದೂರ ದೂರ ಚಿತ್ರದಲ್ಲಿ ಅಪೇಕ್ಷಾ ಅವರಿಗೆ ಇಲ್ಲಿ ಎರಡು ಶೇಡ್ ಇರುವ ಪಾತ್ರವಿದೆ. ಕಾಫಿ ತೋಟದಲ್ಲಿ ಪಕ್ಕಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಅವರಿಲ್ಲಿ, ಸೆನ್ಸಿಟಿವ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಬಹುತೇಕ ಕುಂದಾಪುರ ಶೈಲಿಯ ಸಿನೆಮಾ. ಇಲ್ಲಿ ಕುಂದಾಪುರದ ಹುಡುಗಿಯಾಗಿ ನಟಿಸಿರುವ ಆಪೇಕ್ಷಾಗೆ ಸಂಭಾಷಣೆ ಕೂಡ ಕುಂದಾಪುರ ಶೈಲಿಯಲ್ಲೇ ಇದೆಯಂತೆ. ಹೊಸತನ, ಹೊಸ ಪ್ರಯೋಗದ ಚಿತ್ರದಲ್ಲಿ ನಟಿಸಿರುವ ಅಪೇಕ್ಷಾಗೆ ಇನ್ನಿಲ್ಲದ ಖುಷಿ.
ಇದಷ್ಟೇ ಅಲ್ಲ, ಅಪೇಕ್ಷಾ ಒಡೆಯರ್ ಅಭಿನಯದ ಮತ್ತೂಂದು ಚಿತ್ರ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಅದು ಕಿನಾರೆ .ಇದು ಬಹುತೇಕ ದಕ್ಷಿಣ ಭಾಗದಲ್ಲೇ ಚಿತ್ರೀಕರಣಗೊಂಡ ಚಿತ್ರ. ಈ ಚಿತ್ರದಲ್ಲಿ ಅಪೇಕ್ಷಾ ಡಾಕ್ಟರ್ ಆಗಿ ನಟಿಸಿದ್ದಾರೆ. ಕಿನಾರೆ ಮುಗ್ಧ ಮನಸುಗಳ ನಡುವಿನ ಪ್ರೀತಿಯ ಕಥೆ. ಈ ಚಿತ್ರಕ್ಕೆ ದೇವರಾಜ್ ಪೂಜಾರಿ ನಿರ್ದೇಶಕರು. ಇಲ್ಲಿ ಹೊಸಕಥೆ, ಹೊಸ ವಿಚಾರ, ಹೊಸ ಪ್ರಯೋಗ ಮೇಳೈಸಿದೆ. ಚಿತ್ರ ನೋಡಿದವರಿಗೊಂದು ಬಾಲ್ಯದ ನೆನಪು, ಪ್ರೀತಿಯ ಅನುಭವ ಕಟ್ಟಿಕೊಡುತ್ತದೆ. ಇಲ್ಲಿ ಕಥೆಯೇ ಹೀರೋ. ಈ ಚಿತ್ರದಲ್ಲಿ ಮಾತುಗಳಿಗಿಂತ ಭಾವನೆಗಳೇ ಹೆಚ್ಚು ಮಾತಾಡುತ್ತವೆ. ಬಹುತೇಕ ಕರಾವಳಿ ಸುತ್ತ ಚಿತ್ರೀಕರಣ ನಡೆದಿದೆ. ಎಲ್ಲವೂ ಹೊಸದಾಗಿ ಕಾಣಿಸುವಷ್ಟರ ಮಟ್ಟಿಗೆ ಕಿನಾರೆ ಮೂಡಿ ಬಂದಿದೆ’ ಎಂದು ತಮ್ಮ ಕಿನಾರೆ ಅನುಭವ ಬಿಚ್ಚಿಡುತ್ತಾರೆ.