Advertisement

ಪದವಿ ಪೂರ್ವ ಪ್ರವೇಶ ಪಡೆದ ಅಂಜಲಿ ಅನೀಶ್‌

12:57 PM Oct 07, 2020 | Suhan S |

ಯೋಗರಾಜ್‌ ಭಟ್‌ ಮತ್ತು ರವಿ ಶಾಮನೂರ್‌ ಜಂಟಿಯಾಗಿ ನಿರ್ಮಿಸುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಪದವಿ ಪೂರ್ವ’ ಚಿತ್ರ ಕೆಲ ತಿಂಗಳ ಹಿಂದಷ್ಟೇ ಅನೌನ್ಸ್‌ ಆಗಿತ್ತು. ನವ ಪ್ರತಿಭೆ ಪೃಥ್ವಿ ಶಾಮನೂರ್‌ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ, ಈ ಚಿತ್ರಕ್ಕೆ ಈಗ ನಾಯಕಿಯನ್ನು ಆಯ್ಕೆ ಮಾಡಿದೆ ಚಿತ್ರತಂಡ. ಅಂದಹಾಗೆ, “ಪದವಿ ಪೂರ್ವ’ ಚಿತ್ರಕ್ಕೆ ನವ ಪ್ರತಿಭೆ ಅಂಜಲಿ ಅನೀಶ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Advertisement

ಹಲವು ಫ್ಯಾಷನ್‌ ಶೋಗಳಲ್ಲಿ ರೂಪದರ್ಶಿಯಾಗಿ ಭಾಗವಹಿಸಿ ವಿಜೇತೆಯಾಗಿರುವ ಮತ್ತು ನ್ಯಾಷನಲ್‌ ಫ್ಯಾಷನ್‌ ಶೋಗಳಲ್ಲಿ ರನ್ನರ್‌ ಅಪ್‌ ಕಿರೀಟ ಮುಡಿಗೇರಿಸಿಕೊಂಡಿದ್ದ ಅಂಜಲಿ ಅನೀಶ್‌ ಈಗ “ಪದವಿ ಪೂರ್ವ’ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಶಿಕಾಗೋದ “ಸೆಕೆಂಡ್‌ ಸಿಟಿ’ ಆ್ಯಕ್ಟಿಂಗ್‌ ಸ್ಕೂಲ್‌ ಹಾಗು “ಅನುಪಮ್‌ ಖೇರ್‌’ ಆ್ಯಕ್ಟಿಂಗ್‌ ಸ್ಕೂಲ್‌ನಲ್ಲಿ ನಟನೆಯ ತರಬೇತಿಯನ್ನು ಪಡೆದುಕೊಂಡಿರುವ ಅಂಜಲಿ ಅನೀಶ್‌, ಕೆಲ ಬಾಲಿವುಡ್‌ ಮತ್ತು ಕನ್ನಡ ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಸದ್ಯ ಚಿತ್ರದ ನಾಯಕ ಮತ್ತು ನಾಯಕಿಯ ಸೇರಿದಂತೆ ಚಿತ್ರದ ಬಹುತೇಕ ಪಾತ್ರಗಳನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಿರುವ ಚಿತ್ರತಂಡ, ಅನೇಕ ಹೊಸ ಪ್ರತಿಭೆಗಳನ್ನು “ಪದವಿ ಪೂರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಸಿದ್ದತೆ ಮಾಡಿ ಕೊಂಡಿದೆ. “ಪದವಿ ಪೂರ್ವ’ ಹರಿಪ್ರಸಾದ್‌ ಜಯಣ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಾಗಿದ್ದು, ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.

ಹದಿಹರೆಯದ ಹುಡುಗರ ಮೋಜು, ಮಸ್ತಿ, ಮೋಹ, ಸ್ನೇಹಗಳ ಕುರಿತಾದಕಥಾ ಹಂದರ ಹೊಂದಿರುವ “ಪದವಿ ಪೂರ್ವ’ ಚಿತ್ರವನ್ನು ಮಲೆನಾಡಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next