Advertisement

ಮೇರೆ ಪಾಸ್‌ ಮಾ ಹೈ ಅಮ್ಮನ ಜತೆ ಸೆಟ್‌ಗೆ ಬರು”ತಾರೆ’

12:47 PM May 12, 2018 | Team Udayavani |

ನಮ್ಮಲ್ಲಿ ಅನೇಕರು ಅಮ್ಮ ಇಲ್ಲದೆ ನಮ್ಮ ಯಾವ ಕೆಲಸವೂ ನಡೆಯುವುದೇ ಇಲ್ಲ. ಅವಳನ್ನು ಅಷ್ಟು ಅವಲಂಬಿಸಿರುತ್ತಾರೆ. ಸಮಸ್ಯೆ ಚಿಕ್ಕದಿರಲಿ, ದೊಡ್ಡದಿರಲಿ ಅವಳ ಬಳಿ ಹೇಳಿಕೊಂಡರೇನೇ ಮನಸ್ಸಿಗೆ ಸಮಾಧಾನ. ಹಿಂದೆಲ್ಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಅಮ್ಮ ಬರಲೇಬೇಕಿತ್ತು. ಮುಂದೆ ದೊಡ್ಡವರಾಗಿ ಕೆಲಸಕ್ಕೆ ಸೇರಿದ ಮಕ್ಕಳು ಅಮ್ಮನನ್ನು ಕಚೇರಿಗೆ ಕರೆದೊಯ್ಯುವುದನ್ನು ಎಂದಾದರೂ ನೋಡಿದ್ದೀರಾ? ಅದಕ್ಕೂ ಪುಣ್ಯ ಮಾಡಿರಬೇಕು. ಆ ಪುಣ್ಯ ಕನ್ನಡದ ಸಿನಿ ತಾರೆಯರಿಗೆ ದಕ್ಕಿದೆ… 

Advertisement

ಅಮ್ಮ ಜತೆಗಿದ್ದರೆ ಆನೆ ಬಲ!
ನನಗೆ ಶೂಟಿಂಗ್‌ಗೆ ಹೋಗುವಾಗ ಅಮ್ಮ ಬೇಕೇ ಬೇಕು. ಅಷ್ಟು ಹಚ್ಚಿಕೊಂಡಿದ್ದೇನೆ. ಸಿನಿಮಾ ಶೂಟಿಂಗ್‌ ಎಂದರೆ ಅಲ್ಲಿ ಪ್ರತಿದಿನ ಹೊಸ ಹೊಸ ಲೊಕೇಶನ್‌ಗಳಲ್ಲಿ, ಹೊಸ ಹೊಸ ತಂತ್ರಜ್ಞರೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಬಿಸಿಲು ಮಳೆಯೆನ್ನದೆ ನಾನಾ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಹೀಗಾಗಿ ಅಮ್ಮ ಜೊತೆ ಇದ್ದರೆ ನನಗೆ ಆನೆ ಬಲ. ಅದೆಂಥದ್ದೇ ಸಮಸ್ಯೆ ಬಂದರೂ ಎದುರಿಸುವ ಛಲ ಬರುತ್ತೆ. ಕೆಲವರು ತಮ್ಮ ಜೊತೆ ದೇವರ ಫೋಟೋ, ತಾಯತ ಎಲ್ಲಾ ಇಟ್ಟುಕೊಳ್ತಾರೆ. ಸಮಸ್ಯೆ ಬಂದಾಗ ಅದರತ್ತ ನೋಟ ಬೀರಿ ಸ್ಫೂರ್ತಿ ಪಡೆದುಕೊಳ್ಳುತ್ತಾರೆ. ನನಗೆ ಅಮ್ಮ ಹತ್ತಿರ ಇದರೆ ಅಷ್ಟೇ ಸಾಕು! ಅಮ್ಮ ನನ್ನ ಜೊತೆ ಇರದೇ ಇರುತ್ತಿದ್ದರೆ ನಾನಿವತ್ತು ನಟಿಯಾಗುತ್ತಿರಲಿಲ್ಲ. ಸೆಟ್‌ನಲ್ಲಿ ಅಮ್ಮ ಕಾಣಲಿಲ್ಲ ಎಂದರೆ ಮನಸ್ಸು ತುಂಬಾ ಚಡಪಡಿಸುತ್ತೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅಮ್ಮ ಎಂದರೆ ನನ್ನ ಭವಿಷ್ಯ.
– ಹರಿಪ್ರಿಯಾ

ಅಮ್ಮನಿಗೆ 100 ಮಾರ್ಕ್ಸ್‌  ಕೊಟ್ರೂ ಸಾಲಲ್ಲ…
ಅಮ್ಮ, ಮಗಳಾಗಿ, ಅಕ್ಕನಾಗಿ, ಒಳ್ಳೆಯ ಸ್ನೇಹಿತೆಯಾಗಿ ನನ್ನನ್ನು ನೋಡಿಕೊಳ್ಳುತ್ತಾರೆ. ಮುದ್ದಿಸಿದ್ದಾರೆ, ಪ್ರೀತಿಸುತ್ತಲೂ ಇದ್ದಾರೆ. ಇಷ್ಟು ವರ್ಷಗಳ ವೃತ್ತಿಯಲ್ಲಿ ಸೆಟ್‌ಗೆ ಅಮ್ಮನಿಲ್ಲದೆ ಹೋದ ದಿನಗಳು ಕಡಿಮೆ. ಅಮ್ಮ ಸೆಟ್‌ನಲ್ಲಿದ್ದರೆ ಟೈಮ್‌ ಟು ಟೈಮ್‌ ಹಣ್ಣು, ಎಳನೀರು, ಜ್ಯೂಸ್‌ ಮಿಸ್‌ ಆಗೋದೇ ಇಲ್ಲ. ಕೆಲ ಸೀನ್‌ಗಳಿಗೆ ತಯಾರಿ ನಡೆಸುವಾಗ ಅಮ್ಮನ ಮೇಲೆ ಕೋಪಿಸಿಕೊಂಡಿದ್ದೂ ಇದೆ. ಸೀರಿಯಸ್‌ ಸನ್ನಿವೇಶದ ಶೂಟ್‌ ನಡೆಯುತ್ತಿದ್ದರೆ ನಾನು ಸೀರಿಯಸ್‌ ಮೂಡ್‌ನ‌ಲ್ಲಿರುತ್ತಿದ್ದರೆ ಅಮ್ಮ ಮಧ್ಯದಲ್ಲಿ ಜ್ಯೂಸ್‌ ಕುಡಿ, ಹಣ್ಣು ತಿನ್ನು ಅಂತ ಟ್ರೇ ಹಿಡಿದು ಬರುತ್ತಿದ್ದರು. ಆಗ ರೇಗಾಡುತ್ತಿದ್ದೆ. ಆದರೆ, ಅಮ್ಮನಿಗೆ ಅವ್ಯಾವುವೂ ಲೆಕ್ಕವೇ ಇಲ್ಲ. ಹಣ್ಣು ತಿನ್ನು, ಜ್ಯೂಸ್‌ ಕುಡಿ ಅಂತ ಒತ್ತಾಯಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮನೆಯನ್ನೂ ಸರಿದೂಗಿಸಿಕೊಂಡು, ಇತ್ತ ನನ್ನನ್ನೂ ನೋಡಿಕೊಳ್ಳುವ ಅಮ್ಮನಿಗೆ 100 ಮಾರ್ಕ್ಸ್ ಕೊಟ್ಟರೂ ಸಾಲದು. ಅಮ್ಮ ಅಂದರೆ ಹೇಳಲಾಗದಷ್ಟು ಖುಷಿ ಮತ್ತು ಪ್ರೀತಿ. ಅಮ್ಮ ಐ ಲವ್‌ ಯೂ…
– ಹರ್ಷಿಕಾ ಪೂಣಚ್ಚ

ಅಮ್ಮ ಎಂಬ ಅಲಾರಂ ಗಡಿಯಾರ
ಸಿನಿಮಾ ಸೆಟ್‌ ಅಂತ ಅಲ್ಲ, ನಾನೆಲ್ಲೇ ಹೋದರೂ, ಅಮ್ಮ ನನ್ನ ಜೊತೆಯಿದ್ದು ಸಾಥ್‌ ಕೊಡುತ್ತಾರೆ. ನನ್ನ ಬದುಕಿನ ಪಿಲ್ಲರ್‌ ಅವರು. ಅಮ್ಮ ಕೂಡ ಕಲಾವಿದೆಯಾಗಿರುವುದರಿಂದ ಅವರಿಗೆ ಚಿತ್ರರಂಗದ ಕುರಿತು ಹೆಚ್ಚಿನ ತಿಳಿವಳಿಕೆ ಇದೆ. ಹೀಗಾಗಿ ನನ್ನ ವೃತ್ತಿಬದುಕಿನಲ್ಲಿ ಅವರ ಪಾತ್ರವೂ ಇದೆ. ಅಮ್ಮ ಸರ್ಕಾರಿ ನೌಕರಿಯಲ್ಲಿದ್ದವರು. ನನಗೋಸ್ಕರ ವಿಆರ್‌ಎಸ್‌ ಪಡೆದು ನನ್ನ ಬೆಂಬಲಕ್ಕೆ ನಿಂತರು. ಅಮ್ಮ ನನಗೆ ಅಲರಾಂ ಇದ್ದಂಗೆ. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗಲೂ ಜೊತೆಯಿದ್ದು ಎಚ್ಚರಿಕೆಯಿಂದ ಮುನ್ನಡೆಸಿದ್ದಾರೆ. ಅಮ್ಮ ಸೆಟ್‌ಗೆ ಬರದಿದ್ದಾಗ, ನಾನು ಎಮೋಷನಲ್‌ ಆಗಿದ್ದೂ ಇದೆ. ಅಮ್ಮನೊಂದಿಗೆ ಜಗಳ ಮಾಡಿದ್ದೇನೆ, ಮುನಿಸಿಕೊಂಡಿದ್ದೇನೆ. ಆದರೂ, ಅಮ್ಮ ಮಾತ್ರ ಒಂಚೂರು ಬೇಸರಿಸಿಕೊಳ್ಳದೆ, ನಗುತ್ತಲೇ ನನ್ನ ಆಸೆ, ಆಕಾಂಕ್ಷೆ ಈಡೇರಿಸಿದ್ದಾರೆ. ಅಮ್ಮ ಎಂಬ ಪದಕ್ಕೆ ದೊಡ್ಡ ಅರ್ಥವಿದೆ. ಸೆಟ್‌ನಲ್ಲಿ ಅಮ್ಮ ಇದ್ದರೆ, ಯಾವ ಸಮಸ್ಯೆಯೂ ಇರೋದಿಲ್ಲ. 
– ರೂಪಿಕಾ

ನನ್ನಮ್ಮನಂಥವರು ಎಲ್ಲರಿಗೂ ಸಿಗಲಿ
ಸೆಟ್‌ನಲ್ಲಿ ಊಟ ಹಾಕಿಸಿಕೊಳ್ಳುವಾಗ ಸ್ವಲ್ಪ ಬಡಿಸುತ್ತಿದ್ದಂತೇ ಸಾಕು ಎಂದುಬಿಡುತ್ತಿದ್ದೆ. ಬಡಿಸುವವರೂ ಅರ್ಧಕ್ಕೆ ನಿಲ್ಲಿಸಿಬಿಡುತ್ತಿದ್ದರು. ಆದರೆ, ಅಮ್ಮ ಇದ್ದರೆ ಮಾತ್ರ ನಾನು ಸಾಕು ಎಂದರೂ ತಟ್ಟೆ ತುಂಬಾ ಬಡಿಸಿಕೊಳ್ಳುವವರೆಗೂ ಅವರು ಸುಮ್ಮನಿರುವುದೇ ಇಲ್ಲ. ಅದೇ ವ್ಯತ್ಯಾಸ. ಅಮ್ಮ ತುಂಬಾ ಎಮೋಷನಲ್‌. ನಾನು ಸೀನ್‌ನಲ್ಲಿ ಇನ್ವಾಲ್‌Ì ಆಗಿ, ಅಳುವ ದೃಶ್ಯದಲ್ಲಿ ಕಣ್ಣೀರು ಹಾಕಿಬಿಟ್ಟರಂತೂ ಅವರು ತಮಗೆ ಗೊತ್ತಿಲ್ಲದಂತೆಯೇ ಅಳುತ್ತಿದ್ದರು. ಆಮೇಲೆ, ನನ್ನ ನಟನೆ ಮೆಚ್ಚಿಕೊಂಡು ಬೆನ್ನು ತಟ್ಟುತ್ತಿದ್ದರು. ಸಿನಿಮಾ ಅಂತ ಗೊತ್ತಿದ್ದರೂ, ಕೆಲವೊಮ್ಮೆ ಅವರು ಆ ದೃಶ್ಯದಲ್ಲಿ ನೀನು ಹಾಗೆ ಮಾಡಬಾರದಿತ್ತು ಅನ್ನೋರು. ಶೂಟಿಂಗ್‌ ನೋಡುವಾಗಲೂ ಅವರು ಒಬ್ಬ ಆಡಿಯನ್ಸ್‌ ಆಗಿ ಗಮನಿಸುತ್ತಿದ್ದರು. ಆದರೆ, ಸೆಟ್‌ನಲ್ಲಿ ಅಮ್ಮ ಮಿಸ್‌ ಆಗಿಬಿಟ್ಟರಂತೂ ಏನೋ ಕಳೆದುಕೊಂಡಂತಾಗುತ್ತಿತ್ತು. ಅಮ್ಮ ನನ್ನ ಕುರಿತು ತುಂಬಾ ಕಾಳಜಿ ವಹಿಸುತ್ತಾರೆ. ನನ್ನಮ್ಮನಂಥವರು ಎಲ್ಲರಿಗೂ ಸಿಗಬೇಕು.
– ಐಶಾನಿ ಶೆಟ್ಟಿ

Advertisement

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next