Advertisement

ದಕ್ಷಿಣದ ಮೇರು ನಟಿ, ನಿರ್ಮಾಪಕಿ ಬಿ.ವಿ.ರಾಧಾ ಇನ್ನಿಲ್ಲ 

08:45 AM Sep 10, 2017 | |

ಬೆಂಗಳೂರು: ದಕ್ಷಿಣದ ಮೇರು ನಟಿ, ಹಿರಿಯ ನಿರ್ಮಾಪಕಿ ಬಿ.ವಿ.ರಾಧಾ ಭಾನುವಾರ ನಸುಕಿನ ವೇಳೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಅವರಿಗೆ 69 ವರ್ಷ ವಯಸ್ಸಾಗಿತ್ತು. 

Advertisement

ಬೆಳಗ್ಗೆ 4 ಗಂಟೆಯ ವೇಳೆಗೆ ರಾಧಾ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ಕೂಡಲೇ ಕಲ್ಯಾಣನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. 

 ಚಲನಚಿತ್ರ, ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯರಾಗಿದ್ದಾ ರಾಧಾ . ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು ಭಾಷೆಯ 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಅಪಾರ ಜನಪ್ರಿಯತೆ ಪಡೆದಿದ್ದಾರೆ. 

ಪ್ರಯೋಗಶೀಲ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅವರ ಪತ್ನಿಯಾಗಿ ದಾಂಪತ್ಯ ಜೀವನದಲ್ಲಿ ಓರ್ವ ಪುತ್ರಿ ಧನಲಕ್ಮಿ ಯನ್ನು ಪಡೆದಿದ್ದಾರೆ. ಸ್ವಾಮಿ ಅವರು 2 ವರ್ಷಗಳ ಹಿಂದೆ ವಿಧಿವಶರಾಗಿದ್ದರು. 

1964 ರಲ್ಲಿ ತೆರೆಗೆ ಬಂದ ರಾಜ್ ಕುಮಾರ್ ಮತ್ತು ಸಾಹುಕಾರ್ ಜಾನಕಿ ಮುಖ್ಯಭೂಮಿಕೆಯಲ್ಲಿದ್ದ ನವಕೋಟಿ ನಾರಾಯಣ ಚಿತ್ರದ ಸಣ್ಣ  ಪಾತ್ರದ ಮೂಲಕ ಕನ್ನಡದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ರಾಧಾ,  ಕೆ.ಎಸ್.ಎಲ್.ಸ್ವಾಮಿ ಅವರ ನಿರ್ದೇಶನದ ಮೊದಲ ಚಿತ್ರ ತೂಗುದೀಪ(1966)ದಲ್ಲಿ ನರಸಿಂಹರಾಜು ಅವರೊಂದಿಗಿನ ಹಾಸ್ಯ ಪಾತ್ರದ ಮೂಲಕ ಜನಪ್ರಿಯತೆ ಪಡೆದುದಲ್ಲದೇ ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದರು. 

Advertisement

 ಆರು ಮೂರು ಒಂಭತ್ತು, ಭಲೇ ಅದೃಷ್ಟವೋ ಅದೃಷ್ಟ, ಯಾವ ಜನ್ಮದ ಮೈತ್ರಿ, ದೇವರು ಕೊಟ್ಟ ತಂಗಿ ಮತ್ತು ಮಿಥಿಲೆಯ ಸೀತೆಯರು ಮುಂತಾದ  ಚಿತ್ರಗಳಲ್ಲಿ ಅಪಾರ ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 

 ಎರಡನೇ ನಾಯಕಿ, ಪೋಷಕ, ಹಾಸ್ಯ ಮತ್ತು ಖಳ ಛಾಯೆಯಿರುವ ಪಾತ್ರಗಳನ್ನು ನಿರ್ವಹಿಸುವ ಮೂಲಕ ಒಬ್ಬ ನಟಿ ಮಾಡಬಹುದಾದ ಎಲ್ಲ ವಿಧದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಅಪಾರ  ಜನಮನ್ನಣೆ ಪಡೆದಿದ್ದರು. 

 ಚಿತ್ರ ನಿರ್ಮಾಪಕಿಯೂ ಆಗಿದ್ದ  ರಾಧಾ ಜಂಬೂಸವಾರಿ ಮತ್ತು ಹರಕೆಯ ಕುರಿ ಗಳಂತಹ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. 

ರಾಧಾ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. 

ಇಂದು ನಾಗರಭಾವಿಯ ನಿವಾಸದಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next