Advertisement

ಲಂಕಾಸುರನ ಜೊತೆ ವಿನೋದ್‌ ಪ್ರಭಾಕರ್‌ ಮಿಂಚು

04:42 PM Jul 08, 2022 | Team Udayavani |

ಸ್ಯಾಂಡಲ್‌ವುಡ್‌ನ‌ಲ್ಲಿ ಇಲ್ಲಿಯವರೆಗೆ ಆ್ಯಕ್ಷನ್‌ ಹೀರೋ ಆಗಿ ಗುರುತಿಸಿಕೊಂಡಿರುವ ನಟ ವಿನೋದ್‌ ಪ್ರಭಾಕರ್‌ ಈಗ ನಿರ್ಮಾಪಕರಾಗುತ್ತಿದ್ದಾರೆ. “ಟೈಗರ್‌ ಟಾಕೀಸ್‌’ ಹೆಸರಿನಲ್ಲಿ ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸಿರುವ ನಟ ವಿನೋದ್‌ ಪ್ರಭಾಕರ್‌ ಮತ್ತು ಪತ್ನಿ ನಿಶಾ ವಿನೋದ್‌ ಪ್ರಭಾಕರ್‌, ತಮ್ಮ ಬ್ಯಾನರ್‌ ಮೂಲಕ “ಲಂಕಾಸುರ’ ಸಿನಿಮಾವನ್ನು ನಿರ್ಮಿಸಿದ್ದು, ಶೀಘ್ರದಲ್ಲಿಯೇ ತಮ್ಮ ಚೊಚ್ಚಲ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದ್ದಾರೆ.

Advertisement

ಸದ್ಯ “ಲಂಕಾಸುರ’ ಸಿನಿಮಾದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ಸಿನಿಮಾದ ಮೊದಲ ಟೀಸರ್‌ ಬಿಡುಗಡೆಯಾಗಿದೆ.

ಅದ್ಧೂರಿಯಾಗಿ ನಡೆದ “ಲಂಕಾಸುರ’ ಸಿನಿಮಾದ ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ನಟರಾದ ಕ್ರೇಜಿಸ್ಟಾರ್‌ ರವಿಚಂದ್ರನ್‌, ಅಭಿಷೇಕ್‌ ಅಂಬರೀಶ್‌, ದೇವರಾಜ್‌, ಹಿರಿಯ ನಟರಾದ ಉಮೇಶ್‌, ಸುಂದರ್‌ ರಾಜ್‌, ಜೈ ಜಗದೀಶ್‌, ಧರ್ಮ ಕೀರ್ತಿರಾಜ್‌, ಯಶಸ್‌ ಸೂರ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌ ಮತ್ತು ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಹಾಗೂ ಚಿತ್ರರಂಗದ ಅನೇಕ ಗಣ್ಯರ ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇದೇ ವೇಳೆ “ಲಂಕಾಸುರ’ ಸಿನಿಮಾದ ಬಗ್ಗೆ ಮಾತ ನಾಡಿದ ನಟ ಕಂ ನಿರ್ಮಾಪಕ ವಿನೋದ್‌ ಪ್ರಭಾಕರ್‌, “ಇಷ್ಟು ವರ್ಷಗಳ ಕಾಲ ನಟನಾಗಿ ಚಿತ್ರರಂಗ ಮತ್ತು ಪ್ರೇಕ್ಷಕರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ಈಗ ನಮ್ಮದೇ ಪ್ರೊಡಕ್ಷನ್ಸ್‌ ಹೌಸ್‌ ಆರಂಭಿಸುವ ಮೂಲಕ ಸಿನಿಮಾ ನಿರ್ಮಾಣಕ್ಕೂ ಕಾಲಿಡುತ್ತಿದ್ದೇವೆ. ಭವಿಷ್ಯದಲ್ಲಿ ನಮ್ಮ ಬ್ಯಾನರ್‌ ಮೂಲಕ ಹೊಸಥರದ ಸಿನಿಮಾಗಳನ್ನು ಇಂಡಸ್ಟ್ರಿಗೆ ಕೊಡಬೇಕು, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶವಿದೆ. ನಮ್ಮ ಪ್ರೊಡಕ್ಷನ್‌ ಮೂಲಕ ಮೊದಲ ಕಾಣಿಕೆಯಾಗಿ “ಲಂಕಾಸುರ’ ಸಿನಿಮಾ ನಿರ್ಮಿಸುತ್ತಿದ್ದೇವೆ. ಇದೊಂದು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಮಾಸ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ಎಲ್ಲ ಥರದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆಯಿದೆ. ಈಗ ಸದ್ಯ ಟೀಸರ್‌ ರಿಲೀಸ್‌ ಮಾಡಿದ್ದು, ಮುಂದೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ. ಇಲ್ಲಿಯವರೆಗೆ ಪ್ರೇಕ್ಷಕರು ಮತ್ತು ಚಿತ್ರರಂಗ ನೀಡಿರುವ ಪ್ರೋತ್ಸಾಹ, ಸಹಕಾರ ಮುಂದೆಯೂ ಹೀಗೆ ಇರಲಿ’ ಎಂದು ಕೇಳಿಕೊಂಡರು.

“ಲಂಕಾಸುರ’ ಸಿನಿಮಾದಲ್ಲಿ ನಾಯಕ ವಿನೋದ್‌ ಪ್ರಭಾಕರ್‌ ಅವರಿಗೆ ಪಾರ್ವತಿ ಅರುಣ್‌ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ದೇವರಾಜ್‌, ರವಿಶಂಕರ್‌, ಲೂಸ್‌ಮಾದ ಯೋಗಿ, ಬಲರಾಜವಾಡಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

ಹಾಡುಗಳಿಗೆ ವಿಜೇತ್‌ ಚಂದ್ರ ಸಂಗೀತವಿದ್ದು, ಸುಜ್ಞಾನ್‌ ಛಾಯಾಗ್ರಹಣ, ದೀಪು ಎಸ್‌. ಕುಮಾರ್‌ ಸಂಕಲನವಿದೆ. ಪ್ರಮೋದ್‌ ಕುಮಾರ್‌ ಡಿ. ಎಸ್‌ ನಿರ್ದೇಶನವಿದೆ. “ಲಂಕಾಸುರ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಸದ್ಯ ಟೀಸರ್‌ ಬಿಡುಗಡೆ ಮೂಲಕ “ಲಂಕಾಸುರ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಸೆಪ್ಟೆಂಬರ್‌ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next