Advertisement

ನಟ ವಿನೋದ್‌ ಕುಮಾರ್‌ ಶೂಟೌಟ್‌ ಪ್ರಕರಣ: ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ

10:04 AM Mar 21, 2020 | Sriram |

ಬೆಂಗಳೂರು: 2008ರಲ್ಲಿ ನಡೆದಿದ್ದ ನಟ ವಿನೋದ್‌ ಕುಮಾರ್‌ ಶೂಟೌಟ್‌ ಪ್ರಕರಣದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಗೋವರ್ಧನ ಮೂರ್ತಿಯನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿದ ಹೈಕೋರ್ಟ್‌, ಜೀವಾವಧಿ ಶಿಕ್ಷೆ ಮತ್ತು ಐದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ಪ್ರಕರಣದಲ್ಲಿ ಗೋವರ್ಧನ ಮೂರ್ತಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ (ಬಾಗಲೂರು ಪೊಲೀಸರು) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಪುರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಎಸ್‌.ಎನ್‌. ಸತ್ಯನಾರಾಯಣ ಮತ್ತು ನ್ಯಾ. ಎಚ್‌.ಪಿ.ಸಂದೇಶ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿತು.

ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸಲು ಪೂರಕ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್‌ (ಪೊಲೀಸರು) ಒದಗಿಸಿಲ್ಲ. ಘಟನಾ ಸ್ಥಳದಲ್ಲಿ ಪತ್ತೆಯಾದ ಗನ್‌ನ ಗುಂಡಿಗೂ, ಮೃತ ವಿನೋದ್‌ ದೇಹದಲ್ಲಿದ್ದ ಗುಂಡಿಗೂ ಹೊಂದಾಣಿಕೆ ಇಲ್ಲ. ಗೋವರ್ಧಮೂರ್ತಿ ಅಂಗಿಯ ಮೇಲಿದ್ದ ರಕ್ತದ ಕಲೆಗೂ ಮತ್ತು ಮೃತನ ರಕ್ತಕ್ಕೂ ಸಾಮ್ಯತೆ ಇಲ್ಲ ಎಂದು ವಿಚಾರಣಾ ನ್ಯಾಯಾಲಯ ತಿಳಿಸಿದೆ. ಆದರೆ, ಗೋವರ್ಧನ ಮೂರ್ತಿಯೇ ವಿನೋದ್‌ಗೆ ಗುಂಡಿಕ್ಕಿ ಕೊಲೆ ಮಾಡಿರುವುದಕ್ಕೆ ಪೂರಕ ಹಾಗೂ ಸೂಕ್ತ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್‌ ಒದಗಿಸಿದೆ ಎಂದು ವಿಭಾಗೀಯ ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಹೀಗಾಗಿ, ಪ್ರಕರಣದಲ್ಲಿ ಗೋವರ್ಧನ ಮೂರ್ತಿ ತಪ್ಪಿತಸ್ಥನಾಗಿದ್ದು, ಆತನಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ರು.ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದಂಡದ ಮೊತ್ತದಲ್ಲಿ 4.5 ಲಕ್ಷ ರೂ. ಮೃತನ ತಾಯಿಗೆ ಪಾವತಿಸಬೇಕು. ಉಳಿದ 50 ಸಾವಿರ ರೂ. ಸರ್ಕಾರಕ್ಕೆ ಪಾವತಿಸಬೇಕು. ಕೂಡಲೇ ಬಾಗಲೂರು ಪೊಲೀಸರು ಗೋವರ್ಧನ ಮೂರ್ತಿಯನ್ನು ಬಂಧಿಸಿ, ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯವು ಎಲ್ಲಾ ಕಾನೂನು ಪ್ರಕ್ರಿಯೆ ಪೂರೈಸಿ, ದೋಷಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next