ಕೊಚ್ಚಿ: ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ ಆರೋಪದಲ್ಲಿ ನಟ ವಿನಾಯಕನ್ ಅವರನ್ನು ಪೊಲೀಸರು ಬಂಧಿಸಿರುವ ಘಟನೆ ಎರ್ನಾಕುಲಂನಲ್ಲಿ ನಡೆದಿದೆ.
ಮಾಲಿವುಡ್ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ನಟ ವಿನಾಯಕನ್ ಇತ್ತೀಚೆಗೆ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದರು.
ನಟ ವಿನಾಯಕನ್ ಅವರು ಕುಡಿದ ಮತ್ತಿನಲ್ಲಿ ತನ್ನ ಅಪಾರ್ಟ್‌ಮೆಂಟ್ ನಿವಾಸಿಗಳ ಜೊತೆ ಗಲಾಟೆ ಮಾಡಿದ್ದಾರೆ. ಇದರಿಂದ ನಟನ ವಿರುದ್ಧ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕಾರಣದಿಂದ ವಿಚಾರಣೆಗೆಂದು ಪೊಲೀಸರು ಠಾಣೆಗೆ ಕರೆಸಿದ್ದಾರೆ.
ಆದರೆ ವಿಚಾರಣೆ ವೇಳೆ ಎರ್ನಾಕುಲಂ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಯ ಜೊತೆಗೂ ನಟ ವಿನಾಯಕನ್ ಕಿರಿಕ್ ಮಾಡಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆ ಬಳಿಕ ಅವರನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.
ನಟ ವಿನಾಯಕನ್ ಅವರು ಅಸಭ್ಯವಾಗಿ ವರ್ತಿಸ, ಗಲಾಟೆ ಮಾಡಿದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಎಚ್ಚರಿಕೆಯನ್ನು ನೀಡಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ಉತ್ತರ ಪೊಲೀಸ್ ಎಸ್‌ಎಚ್‌ಒ (ಠಾಣಾಧಿಕಾರಿ) ಇಂಡಿಯಾ ಟುಡೇಗೆ ತಿಳಿಸಿದ್ದಾರೆ.