ಬೆಂಗಳೂರು : ಕನ್ನಡದ ಸೂಪರ್ ಸ್ಟಾರ್, ನಿರ್ದೇಶಕ ಉಪೇಂದ್ರ ಅವರು ಪರಭಾಷೆಯ ಕೆಲ ಚಿತ್ರಗಳಲ್ಲಿ ನಟಿಸಿರುವುದು ಎಲ್ಲರಿಗೂ ಗೊತ್ತು. ಈಗ ಮತ್ತೊಂದು ದೊಡ್ಡ ತೆಲುಗು ಸಿನಿಮಾದಲ್ಲಿ ಉಪ್ಪಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಲಿವುಡ್ ನಟ ವರುಣ್ ತೇಜ್ ನಟಿಸುತ್ತಿರುವ ಬಹುನಿರೀಕ್ಷಿತ ‘ಘನಿ’ ಚಿತ್ರದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಎರಡನೇ ಹಂತದ ಶೂಟಿಂಗ್ ಗೆ ಚಿತ್ರತಂಡ ಅಣಿಯಾಗುತ್ತಿರುವಾಗಲೇ ಘನಿ ಬಳಗಕ್ಕೆ ಮತ್ತೊಬ್ಬ ಸ್ಟಾರ್ ನಟನ ಆಗಮನವಾಗಿದೆ. ಅದು ಬೇರೆ ಯಾರು ಅಲ್ಲ ಕನ್ನಡದ ಒನ್ ಆ್ಯಂಡ್ ಓನ್ಲಿ ಬುದ್ಧಿವಂತ ಖ್ಯಾತಿಯ ಉಪೇಂದ್ರ.
ಘನಿ ಸೆಟ್ಟೇರಿದಾಗಿನಿಂದಲೂ ಉಪೇಂದ್ರ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ, ಇದುವರೆಗೆ ಅದು ಕನ್ಫರ್ಮ್ ಆಗಿರಲಿಲ್ಲ. ಸದ್ಯ ಚಿತ್ರತಂಡದಿಂದಲೇ ಅಧಿಕೃತವಾದ ಮಾಹಿತಿ ಹೊರಬಿದ್ದಿದ್ದು, ನಿನ್ನೆ ( ಫೆ.18)ಯಷ್ಟೆ ಉಪೇಂದ್ರ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.
ಘನಿ ಚಿತ್ರದಲ್ಲಿ ಉಪೇಂದ್ರ ಅವರು ನಿಭಾಯಿಸಲಿರುವ ಪಾತ್ರದ ಬಗ್ಗೆ ಕುತೂಹಲವಿದೆ. ಬಹುಮುಖ್ಯ ಪಾತ್ರದಲ್ಲಿ ಉಪ್ಪಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಮಾತ್ರ ಅದನ್ನು ಇನ್ನೂ ರಿವೀಲ್ ಮಾಡಿಲ್ಲ.
Related Articles
ಇನ್ನು ಕಿರಣ್ ಕೊರ್ರಪತಿ ನಿರ್ದೇಶನದ ಘನಿ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ, ಜಗಪತಿ ಬಾಬು ಹಾಗೂ ನವೀನ್ ಚಂದ್ರ ಸೇರಿದಂತೆ ದೊಡ್ಡ ತಾರಾಗಣ ನಟಿಸುತ್ತಿದೆ. ಶೀಘ್ರದಲ್ಲೇ ಚಿತ್ರೀಕರಣ ಕಾರ್ಯ ಮುಗಿಸಲಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಲಿದೆ.