Advertisement

ಚಿತ್ರರಂಗದ 3 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಣೆಗೆ ಮುಂದಾದ ನಟ ಉಪೇಂದ್ರ

07:59 AM May 11, 2021 | Team Udayavani |

ಬೆಂಗಳೂರು: ಕೋವಿಡ್ ಹೊಡೆತಕ್ಕೆ ಎಲ್ಲಾ ಕ್ಷೇತ್ರಗಳಂತೆ ಸಿನಿಮಾ ಕ್ಷೇತ್ರವೂ ತತ್ತರಿಸಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಸಾವಿ ರಾರು ಕಾರ್ಮಿಕರು ಇವತ್ತು ಕಷ್ಟದ ಸ್ಥಿತಿಯಲ್ಲಿದ್ದಾರೆ. ಇವರ ಕಷ್ಟಕ್ಕೆ ಅನೇಕ ನಟ-ನಟಿಯರು ಸಹಾಯ ಮಾಡುತ್ತಿದ್ದು, ಈಗ ನಟ ಉಪೇಂದ್ರ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಒಕ್ಕೂಟದ ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ನೀಡಲು ಉಪೇಂದ್ರ ಮುಂದಾಗಿದ್ದಾರೆ.

Advertisement

ಈ ಬಗ್ಗೆ ಮಾಹಿತಿ ನೀಡಿರುವ ಉಪೇಂದ್ರ, “ಕನ್ನಡ ಚಲನ ಚಿತ್ರರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್‌ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್‌ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ’ ಎಂದಿದ್ದಾರೆ.

ಕಷ್ಟ ಕಾಲದಲ್ಲಿ ಕಾರ್ಮಿಕರ, ಕಲಾವಿದರ ಸಹಾಯಕ್ಕೆ ಮುಂದಾಗಿರುವ ಉಪೇಂದ್ರ ಅವರಿಗೆ ಅನೇಕರು ಬೆಂಬಲ ಸೂಚಿಸಿ, ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಈ ಬಗ್ಗೆಯೂ ಉಪೇಂದ್ರ ಮಾಹಿತಿ ನೀಡಿದ್ದು, ದಾವಣಗೆರೆ ಮಾಜಿ ಶಾಸಕರು ಯಜಮಾನ್‌ ಮೋತಿ ವೀರಣ್ಣ ಅವರ ಪುತ್ರ ಯಜಮಾನ್‌ ಮೋತಿ ರಾಜೇಂದ್ರ ಒಂದು ಲಕ್ಷ ರೂ. ದೇಣಿಗೆ ನೀಡಲು ಮುಂದಾಗಿದ್ದಾರೆ. ಆ ಹಣವನ್ನು ನಮ್ಮ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ನೀಡಲು ಸೂಚಿಸಿದ್ದಾರೆ.

ಡಾ.ಗಿರೀಶ್‌ 25 ಸಾವಿರ ರೂ. ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಆ ಹಣದಿಂದ ಗುಡಿಸಲು ನಿವಾಸಿಗಳಿಗೆ ದಿನಸಿ ಕಿಟ್‌ ವಿತರಿಸಲು ಅಪೇಕ್ಷೆ ಪಟ್ಟಿದ್ದಾರೆ. ಇದನ್ನು ವಿತರಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತೇವೆ. ಜೊತೆ ಗೆ ಎಸ್‌.ಕೆ.ಸ್ಟೀಲ್ಸ್‌ ಕಂಪನಿ ವತಿಯಿಂದ 5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರು, ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ. ಸದ್ಯದಲ್ಲೇ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next