ಬೆಳಗಾವಿ: ಕ್ರೀಡೆ, ಆರೋಗ್ಯದಿಂದ ಭಾರತ ಸದೃಢವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಆರೋಗ್ಯ ಇದ್ದರೆ ಎಲ್ಲವೂ ಇದೆ. ಶಿಕ್ಷಣದೊಂದಿಗೆ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಂತಾರಾಷ್ಟ್ರೀಯ ಟೆನ್ನಿಸ್ ಪಟು ಸಾನಿಯಾ ಮಿರ್ಜಾ ಅಭಿಪ್ರಾಯ ಪಟ್ಟರು.
ನಗರದ ಲೋಕಮಾನ್ಯ ಮಲ್ಟಿಪರ್ಪಸ್ ಸೌಹಾರ್ದ ಸೊಸೈಟಿ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆ-ಶಿಕ್ಷಣ ಒಂದೇ ನಾಣ್ಯದ ಮುಖವಿದ್ದಂತೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಕ್ರೀಡೆಯಲ್ಲಿ ದೊಡ್ಡ ಸೂಪರ್‌ಸ್ಟಾರ್ ಗಳಾಗುತ್ತಿದ್ದಾರೆ. ಕ್ರೀಡೆಯಲ್ಲಿ ಶ್ರಮಪಟ್ಟು ಮುನ್ನುಗ್ಗಿದ್ದರೆ ನೀವು ಅಂದುಕೊಂಡ ಗುರಿ ಮುಟ್ಟಲು ಸಾಧ್ಯ. ತ್ಯಾಗ, ಪರಿಶ್ರಮವಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಗೆಲುವಿಗಿಂತ ಮುಂಚೆ ಎಲ್ಲರೂ ಸೋಲುತ್ತಾರೆ. ನಂತರದಲ್ಲಿ ಗೆಲುವಿನ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಿರಾಶರಾಗದೆ ನಮ್ಮ ಅರ್ಧ ಜೀವನ ಸೋಲಿನಿಂದಲೇ ಆರಂಭವಾಗುತ್ತದೆ. ನಂತರದಲ್ಲಿ ಆತ್ಮವಿಶ್ವಾದಿಂದ ಮುನ್ನುಗ್ಗಿದರೆ ಗೆಲುವು ನಿಶ್ಚಿತವಾಗುತ್ತದೆ ಎಂದು ಹೇಳಿದರು.
ಬೆಳಗಾವಿಯ ವಾತಾವರಣ ಬಹಳ ಸುಂದರವಾಗಿದೆ. ಮತ್ತೆ ಬೆಳಗಾವಿಗೆ ಬರಬೇಕೆನಿಸುತ್ತದೆ. ಮತ್ತೊಮ್ಮೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ. ಬೆಳಗಾವಿಗೆ ಮೊದಲನೇ ಸಲ ಬಂದಿದ್ದು ಬಹಳ ಖುಷಿ ಆಗಿದೆ. ಸೂರ್ಯ ಉದಯಿಸುವ ಮೊದಲೇ ಜನರು ಅತ್ಯಂತ ಉತ್ಸಾಹದಿಂದ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಮ್ಯಾರಥಾನ್ ಮೂಲಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತವೆ ಎಂದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ತರುಣ ಭಾರತ ಸಂಸ್ಥಾಪಕ ಕಿರಣ ಠಾಕೂರ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.