ಮೈಸೂರು: ಚಿತ್ರನಟ ಶಿವರಾಜ್ ಕುಮಾರ್‌ಗುರುವಾರ ತಮ್ಮ ಕುಟುಂಬ ಸಮೇತ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಇಡೀ ದಿನ ಮೃಗಾಲಯದಲ್ಲಿ ಸಮಯ ಕಳೆದರು.
ತಮ್ಮ ಪತ್ನಿ, ಇಬ್ಬರು ಮಕ್ಕಳು ಹಾಗೂ ಅಳಿಯನ ಜತೆ ಮೃಗಾಲಯಕ್ಕೆ ಭೇಟಿ ನೀಡಿದ ಶಿವಣ್ಣ, ಇತ್ತೀಚೆಗೆ ತಾವು ದತ್ತು ಪಡೆದ ಪಾರ್ವತಿ ಆನೆಗೆ ಆಹಾರ ತಿನ್ನಿಸಿಖುಷಿ ಪಟ್ಟರು. ಬಳಿಕ ಮಾತನಾಡಿದ ಅವರು, ಮೃಗಾಲಯ ಎಂದರೆ ನನಗೆ ತುಂಬಾ ಇಷ್ಟ. ಈ ವಯಸ್ಸಲ್ಲಿ ಇವನಿಗೇನು ಶೋಕಿ ಎಂದರೂ ಪರವಾಗಿಲ್ಲ. ಪ್ರಾಣಿಗಳನ್ನು ನೋಡೋದು ತುಂಬಾ ಇಷ್ಟ. ನಾನು ತುಂಬಾ ವರ್ಷಗಳ ನಂತರ ಮೃಗಾಲಯಕ್ಕೆ ಭೇಟಿ ಕೊಟ್ಟಿದ್ದೇನೆ. ಒಳ ಆವರಣದಲ್ಲಿ ಪ್ರಾಣಿಗಳನ್ನು ನೋಡುತ್ತೇವೆ ಎಂದು ಭಾಸವಾಗುವುದು ಬಿಟ್ಟರೆ ಕಾಡಿಗೆ ಬಂದ ಹಾಗೇ ಅನ್ನಿಸುತ್ತದೆ ಎಂದರು.
ಸಿನಿಮಾ ಸಹ ಒಂದು ಉದ್ಯಮ. ಎಲ್ಲಾ ಉದ್ಯಮದಂತೆ ಇದು ಸಹ ನಿಧಾನವಾಗಿ ಮೇಲೇಳಬೇಕು. ಯಾವ ಸಿನಿಮಾ ಬರಬೇಕು ಅಂತಾನು ನಾನು ಹೇಳ್ಳೋಲ್ಲ. ಎಲ್ಲಾ ಸಿನಿಮಾಗಳು ಒಂದೇ.ಯಾವ ಸಿನಿಮಾ ಬೇಕಾದರೂ ಗೆಲ್ಲಬಹುದು.ಆದರೆಜನಸುರಕ್ಷತೆನೋಡಿಕೊಂಡು ಥಿಯೇಟರ್‌ಗೆ ಬರಲಿ. ಥಿಯೇಟರ್‌ನಲ್ಲಿ ಏನೇ ಸಮಸ್ಯೆ ಇದ್ದರೂ ನೇರವಾಗಿ ಹೇಳಲಿ. ಪ್ರೇಕ್ಷಕರ ಸುರಕ್ಷತೆ ನಮಗೆ ಬಹಳ ಮುಖ್ಯವೆಂದರು.
ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ: ಲಾಕ್‌ಡೌನ್‌ನಿಂದ ಚಿತ್ರರಂಗಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆ ಸಿಎಂ ಬಿಎಸ್‌ವೈ ಚಿತ್ರರಂಗಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ. ಅವರ ಭರವಸೆ ಈಡೇರಿಕೆ ನಿರೀಕ್ಷೆಯಲ್ಲೇ ಇದ್ದೇವೆ. ನಮಗೆ ಅವರಿಂದ ಉತ್ತಮ ಸ್ಪಂದನೆ ಸಿಗುವ ಸಾಧ್ಯತೆ ಇದೆ. ಸರ್ಕಾರಕ್ಕೆ ನಾವು ಒತ್ತಾಯ ಮಾಡುವುದಿಲ್ಲ. ಏಕೆಂದರೆ ಸರ್ಕಾರವೂ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಹೀಗಾಗಿ ಅವರಿಗೂ ಸಮಯ ಬೇಕಾಗುತ್ತೆ. ಸಿಎಂ ಮಾತಿನ ಮೇಲೆ ಭರವಸೆ ಇದೆ. ಚಿತ್ರರಂಗಕ್ಕೆ ಸರ್ಕಾರ ನೆರವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರಮಂದಿರಗಳ ಪುನಾರಂಭ ಖುಷಿ ವಿಚಾರ : ಸಿನಿಮಾ ಮಂದಿರಗಳು ಪುನಾರಂಭವಾಗುತ್ತಿರುವುದು ಖುಷಿಯ ವಿಚಾರ. ಆದರೆ, ಎಷ್ಟು ಜನ ಬರಬೇಕು ಅಂತ ನಟನಾಗಿ ನಾನು ಏನು ಹೇಳಲಾಗುವುದಿಲ್ಲ. ನಟನಾಗಿ ನಾನು ಶೂಟಿಂಗ್ ಮಾಡಬಹುದು, ಆ್ಯಕ್ಟಿಂಗ್ ಮಾಡಬಹುದು. ಚಿತ್ರ ಪ್ರದರ್ಶನ ಹಾಗೂ ಬಿಡುಗಡೆ ಬಗ್ಗೆ ನಾನೇನು ಹೇಳುವುದಿಲ್ಲ. ಅದಕ್ಕೆ ಅಂತ ನಿರ್ಮಾಪಕರಿದ್ದಾರೆ, ಅವರೇ ತೀರ್ಮಾನ ಮಾಡಲಿದ್ದಾರೆ. ನಾನು ಪ್ರೇಕ್ಷಕರಿಗೆ ಸಿನಿಮಾ ನೋಡಲು ಬನ್ನಿ ಎಂದು ಹೇಳಬಹುದಷ್ಟೇ. ಆದರೆ ಸಿನಿಮಾ ಮಂದಿರಕ್ಕೆ ಬನ್ನಿ ಎಂದು ಒತ್ತಾಯ ಮಾಡುವುದಿಲ್ಲ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.