ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇಂದು ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರಂತರ ಸಿನಿಮಾ ಶೂಟಿಂಗ್, “ದಿ ವಿಲನ್’ ಚಿತ್ರದ ಪ್ರಮೋಶನ್ನಲ್ಲಿ ಬ್ಯುಸಿಯಿದ್ದ ಶಿವರಾಜಕುಮಾರ್ ಈಗ ಜ್ವರದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಭಾನುವಾರ ಕಾಣಿಸಿಕೊಂಡ ತೀವ್ರ ಜ್ವರದಿಂದ ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಮತ್ತು ಕೆಮ್ಮು ಹೆಚ್ಚಾದ ಕಾರಣ ಸೆಂಚುರಿ ಸ್ಟಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಶಿವರಾಜಕುಮಾರ್ ಆಪ್ತರು ಹೇಳುವ ಪ್ರಕಾರ ಅವರು ಜ್ವರದಿಂದ ಬಳುತ್ತಿದ್ದರಿಂದ ಭಾನುವಾರವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಆದರೆ ಇಂದು ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾನೆಯೇ ಮಲ್ಯ ಆಸ್ಪತ್ರೆಗೆ ಶಿವಣ್ಣ ದಾಖಲಾಗಿದ್ದಾರೆ. ಸದ್ಯಕ್ಕೆ ಗ್ಲೂಕೋಸ್ ಡ್ರಿಪ್ಸ್ ಹಾಕಿದ್ದು ಬೆಳಗ್ಗೆ ಲಘು ಉಪಹಾರ ಸೇವಿಸಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ರಾಜಕುಮಾರ್ ಹಿರಿಯ ಪುತ್ರ ವಿನಯ್ ರಾಜ್ಕುಮಾರ್ ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿ ಹೋಗಿದ್ದಾರೆ.
ಜೊತೆಗೆ ಶಿವರಾಜಕುಮಾರ್ ಪುತ್ರಿ ನಿವೇದಿತಾ ಕೂಡಾ ತಂದೆ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪುನೀತ್ ರಾಜಕುಮಾರ್ ಕೂಡಾ ಪತ್ನಿ ಅಶ್ವಿನಿ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದು ಶಿವಣ್ಣನ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಪ್ಪು, ಶಿವಣ್ಣಗೆ ಏನೂ ಆಗಿಲ್ಲ. ಸ್ವಲ್ಪ ಜ್ವರ ಹೆಚ್ಚಾಗಿರುವುದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಅಷ್ಟೇ. ನಮ್ಮೆಲ್ಲರೊಂದಿಗೆ ಆರಾಮವಾಗಿ ಮಾತನಾಡಿದ್ದಾರೆ. ಸಂಜೆ ವೇಳೆಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಶಿವಣ್ಣ ಅಂದ್ರೆ ಡೆಡಿಕೇಷನ್: ನಟ, ನಿರ್ದೇಶಕ ಪ್ರೇಮ್ ಇಂದು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ, ಶಿವಣ್ಣ ಅವರ ಆರೋಗ್ಯ ವಿಚಾರಿಸಿದ್ದಾರೆ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಲ್ಪ ಜ್ವರ ಇರೋದ್ರಿಂದ ವೈದ್ಯರು ರೆಸ್ಟ್ ತೆಗೆದುಕೊಳ್ಳಲು ತಿಳಿಸಿದ್ದಾರೆ. ಶಿವಣ್ಣ ಇವತ್ತು ಕೂಡ “ದಿ ವಿಲನ್’ ಪ್ರಮೋಷನ್ಗೆ ಬರುತ್ತೇನೆ ಎಂದು ಫೋನ್ ಮಾಡಿದ್ದರು.
ಶಿವಣ್ಣ ಅಂದ್ರೆ ಅಷ್ಟು ಡೆಡಿಕೇಷನ್, ಇಂತಹ ಒಂದು ಪೀಸ್ ಕನ್ನಡದಲ್ಲಿ ಶಿವಣ್ಣ ಒಬ್ಬರೆ ಎಂದು ಹೊಗಳಿದರು. ಅಲ್ಲದೇ ಯಾವುದೇ ಗಾಳಿ ಸುದ್ದಿಗೆ ಯಾರೂ ಕಿವಿ ಕೊಡಬೇಡಿ. ಶಿವಣ್ಣ ಚೆನ್ನಾಗಿದ್ದಾರೆ, ಸಂಜೆ ವೇಳೆಗೆ ಆರೋಗ್ಯವಾಗೇ ಎದ್ದು ಬರುತ್ತಾರೆ ಎಂದರು. ಸದ್ಯ ಶಿವರಾಜ್ ಕುಮಾರ್ ಅಭಿನಯದ “ರುಸ್ತುಂ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಶಿವಣ್ಣ-ಸುದೀಪ್ ಜೊತೆಯಾಗಿರುವ “ದಿ ವಿಲನ್’ ಸಿನಿಮಾ ಇದೇ ತಿಂಗಳು 18ಕ್ಕೆ ಪ್ರಪಂಚದಾದ್ಯಂತ ತೆರೆ ಕಾಣಲಿದೆ.