ನವದೆಹಲಿ: ಬಾಲಿವುಡ್ ನಟ ಶೇಖರ್ ಸುಮನ್ ಹಾಗೂ ಮಾಜಿ ಕಾಂಗ್ರೆಸ್ ನಾಯಕಿ ರಾಧಿಕಾ ಖೇರಾ ಅವರು ಮಂಗಳವಾರ(ಮೇ.7 ರಂದು) ದೆಹಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಶೇಖರ್ ಸಮನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ರಾಜಕೀಯ ಅಖಾಡಕ್ಕೆ ಪ್ರವೇಶ ಪಡೆದಿದ್ದಾರೆ.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅವರು,”ಜೀವನದಲ್ಲಿ ಎಷ್ಟೋ ಸಂಗತಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ನಡೆಯುತ್ತದೆ. ಇವತ್ತು ನಾನು ಇಲ್ಲಿ ಕುಳಿತಿರುತ್ತೇನೆ ಎಂದು ನಿನ್ನೆಯವರೆಗೂ ನನಗೆ ಗೊತ್ತಿರಲಿಲ್ಲ. ನಾನು ತುಂಬಾ ಸಕಾರಾತ್ಮಕ ಚಿಂತನೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ ಮತ್ತು ದೇವರು ನನ್ನನ್ನು ಇಲ್ಲಿಗೆ ಬರಲು ಆದೇಶಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಶೇಖರ್ ಹೇಳಿದ್ದಾರೆ.
ಇತ್ತೀಚಗಷ್ಟೇ ಕಾಂಗ್ರೆಸ್ ಪಕ್ಷವನ್ನು ರಾಮ ವಿರೋಧಿ ಮತ್ತು ಹಿಂದೂ ವಿರೋಧಿ ಎಂದು ಆರೋಪಿಸಿ ಪಕ್ಷ ತೊರೆದಿದ್ದ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿಯಾಗಿದ್ದ ರಾಧಿಕಾ ಖೇರಾ ಅವರು ಕೂಡ ಈ ವೇಳೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ʼ‘ರಾಮನ ಭಕ್ತೆ ಎಂಬ ಕಾರಣಕ್ಕೆ, ರಾಮಲಲ್ಲಾನ ದರ್ಶನ ಪಡೆದಿದ್ದಕ್ಕೆ ಕೌಶಲ್ಯ ಮಾತೆಯ ಭೂಮಿಯಲ್ಲಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಬಿಜೆಪಿ ಸರ್ಕಾರದ ರಕ್ಷಣೆ ಸಿಗದಿದ್ದರೆ ನಾನು ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ಕಾಂಗ್ರೆಸ್ ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಲ್ಲ, ಅದು ರಾಮ ವಿರೋಧಿ, ಹಿಂದೂ ವಿರೋಧಿ ಕಾಂಗ್ರೆಸ್ ”ಎಂದು ಅವರು ಹೇಳಿದರು.
ಭಾನುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಧಿಕಾ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ಛತ್ತೀಸ್‌ಗಢದ ಕಾಂಗ್ರೆಸ್ ನಾಯಕರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದರು ಮತ್ತು ತಾನು “ರಾಮ ಭಕ್ತೆ” ಎನ್ನುವ ಕಾರಣಕ್ಕೆ ಕೋಣೆಯಲ್ಲಿ ಬೀಗ ಹಾಕಿದರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಇತ್ತೀಚೆಗಷ್ಟೇ ಕಿರುತೆರೆ ನಟಿ ರೂಪಾಲಿ ಗಂಗೂಲಿ ಕೂಡ ಬಿಜೆಪಿ ಪಕ್ಷವನ್ನು ಸೇರಿದ್ದರು.