ಬೆಂಗಳೂರು: ರಾಜ್ಯದಲ್ಲಿ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ. ಆಡಳಿತಾರಾರೂಢ ಭಾರತೀಯ ಜನತಾ ಪಕ್ಷ 12 ಸ್ಥಾನಗಳನ್ನು ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಬಹುಮತಕ್ಕೆ ಅಗತ್ಯವಿದ್ದ ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಂದಿನ ಈ ಫಲಿತಾಂಶದ ಕುರಿತಾಗಿ ಬಹುಭಾಷಾ ನಟ ಮತ್ತು ಜಸ್ಟ್ ಆಸ್ಕಿಂಗ್ ಅಭಿಯಾನದ ರೂವಾರಿ ಪ್ರಕಾಶ್ ರಾಜ್ ಅವರು ಮಾರ್ಮಿಕವಾದ ಟ್ವೀಟ್ ಒಂದನ್ನು ಮಾಡಿದ್ದಾರೆ. ಪ್ರಕಾಶ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಬರೆದುಕೊಂಡಿರುವಂತೆ, ‘ಅಭಿನಂದನೆಗಳು ಕರ್ನಾಟಕ, ಬೆನ್ನಿಗೆ ಚೂರಿ ಹಾಕುವ ವ್ಯಕ್ತಿಗಳು ಮತ್ತೆ ಮುನ್ನಲೆಗೆ ಬಂದಿದ್ದಾರೆ, ಅವರು ನಿಮಗೇ ತಿರುಗುಬಾಣವಾಗಲಾರರು ಎಂದು ನಾನು ಆಶಿಸುತ್ತೇನೆ. ಅನರ್ಹರಿಗೆ ಮಣೆ ಹಾಕಿದ್ದೀರಿ… ಒಳಿತಾಗಲಿ. ‘ಮಾಡಿದ್ದುಣ್ಣೋ ಮಾರಾಯ’ ಈ ಮಾತು ಯಾರಿಗೆ ಅನ್ವಯಿಸುತ್ತದೋ ಕಾದು ನೋಡೋಣ’ ಎಂದು ಬರೆದುಕೊಂಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರಾಜ್ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಪ್ರಸ್ತುತ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತಾಗಿ ಟ್ವಿಟ್ಟರ್ ನಲ್ಲಿ ಪ್ರಕಾಶ್ ರಾಜ್ ಪ್ರಾರಂಭಿಸಿದ್ದ ಜಸ್ಟ್ ಆಸ್ಕಿಂಗ್ ಅಭಿಯಾನದಿಂದ ಈ ನಟ ಕೆಲ ನಿರ್ಧಿಷ್ಟ ಸಿದ್ಧಾಂತದ ಗುಂಪಿನ ತೀವ್ರ ವಿರೋಧವನ್ನು ಎದುರಿಸುತ್ತಾ ಬಂದಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಪ್ರಕಾಶ್ ರಾಜ್ ಅವರು ಈ ಅಭಿಯಾನವನ್ನು ಸಶಕ್ತವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.