ಮುಂಬೈ: ಸೈಬರ್ ವಂಚನೆ ಪ್ರಕರಣದಲ್ಲಿ ವಿದ್ಯಾವಂತರು, ಸೆಲೆಬ್ರಿಟಿಗಳು ವಂಚನೆಗೊಳಗಾಗುತ್ತಿರುವ ನಡುವೆಯೇ ಇದೀಗ ಬಾಲಿವುಡ್ ನಟಿ, ರಾಜಕಾರಣಿ ನಗ್ಮಾ ಮೊರಾರ್ಜಿ ಕೆವೈಸಿ(KYC) ವಂಚನೆಗೊಳಗಾದ ಪ್ರಕರಣ ವರದಿಯಾಗಿದೆ.
ಇದನ್ನೂ ಓದಿ:Video: 60ಕ್ಕೆ ನಿವೃತ್ತಿ…99 ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಆನೆಗೆ ಭಾವಪೂರ್ಣ ವಿದಾಯ
ಸೈಬರ್ ವಂಚಕರು ಕಳುಹಿಸಿದ ನಕಲಿ ಲಿಂಕ್ ಅನ್ನು ಕ್ಲಿಕ್ಕಿಸಿದ ಪರಿಣಾಮ ನಟಿ ನಗ್ಮಾ ಅವರು ತಮ್ಮ ಖಾತೆಯಿಂದ ಒಂದು ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ವರದಿ ವಿವರಿಸಿದೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ನಟಿ ನಗ್ಮಾ ಅವರು ಫೆಬ್ರುವರಿ 28ರಂದು ನಕಲಿ ಲಿಂಕ್ ಅನ್ನು ಕ್ಲಿಕ್ಕಿಸಿದ ನಂತರ ಬ್ಯಾಂಕ್ ಅಧಿಕಾರಿಗಳೆಂದು ಹೇಳಿ ಫೋನ್ ಕರೆ ಬಂದಿದ್ದು, ಅದರಂತೆ ಓಟಿಪಿ ತಿಳಿಸಿದ ತಕ್ಷಣವೇ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ರೂಪಾಯಿ ಡೆಬಿಟ್ ಆಗಿರುವುದಾಗಿ ಮೆಸೇಜ್ ಬಂದಿತ್ತು. ಆ ಬಳಿಕವೇ ನಗ್ಮಾಗೆ ತಾನು ವಂಚನೆಗೊಳಗಾಗಿರುವುದು ತಿಳಿದುಬಂದಿರುವುದಾಗಿ ವರದಿ ಹೇಳಿದೆ.
ಕೆವೈಸಿ ಅಪ್ ಡೇಟ್ ಮಾಡಲು ಸಲಹೆ ನೀಡುವುದಾಗಿ ಹೇಳಿ, ವಂಚಕ ನಗ್ಮಾ ಮೊಬೈಲ್ ಅನ್ನು ರಿಮೋಟ್ ಆ್ಯಕ್ಸಸ್ ಪಡೆದುಕೊಂಡಿದ್ದ, ನಂತರ ಆಕೆಯ ಇಂಟರ್ನೆಟ್ ಖಾತೆಗೆ ಲಾಗಿನ್ ಆಗಿ, ಒಂದು ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.
ಕಳೆದ ಕೆಲವೇ ದಿನಗಳಲ್ಲಿ ಕೆವೈಸಿ ಹೆಸರಿನ ವಂಚನೆ ಪ್ರಕರಣದಲ್ಲಿ ನಗ್ಮಾ ಸೇರಿದಂತೆ ಸುಮಾರು 80 ಜನರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಬಹುತೇಕ ಎಲ್ಲರೂ ಒಂದೇ ಖಾಸಗಿ ಬ್ಯಾಂಕ್ ಗೆ ಸೇರಿದ ಗ್ರಾಹಕರಾಗಿದ್ದಾರೆ.
ಇತ್ತೀಚೆಗೆ ವಿದ್ಯಾವಂತರೇ ಹೆಚ್ಚಾಗಿ ಆನ್ ಲೈನ್ ವಂಚನೆಗೊಳಗಾಗುತ್ತಿರುವುದು ದುರದೃಷ್ಟಕರ ಎಂದು ಮುಂಬೈ ಸೈಬರ್ ಕ್ರೈಮ್ ಡಿಸಿಪಿ ಬಾಲ್ ಸಿಂಗ್ ರಜ್ ಪೂತ್ ತಿಳಿಸಿದ್ದಾರೆ.