ತಿರುವನಂತಪುರಂ: ಮಾಲಿವುಡ್ (Mollywood) ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿರುವ ಹೇಮಾ ಸಮಿತಿ ವರದಿ ಬಗ್ಗೆ (Hema Committee report) ಹಿರಿಯ ನಟ, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Malayalam superstar Mammootty) ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ತನ್ನ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಹೇಮಾ ಸಮಿತಿ ವರದಿಯ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
“ಹೇಮಾ ಸಮಿತಿಯ ವರದಿಯಲ್ಲಿ ಹೇಳಲಾದ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಚಿತ್ರರಂಗದ ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ. ಈಗ ಎದ್ದಿರುವ ದೂರುಗಳ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಪೂರ್ಣ ರೂಪ ನ್ಯಾಯಾಲಯದ ಮುಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲಿ. ನ್ಯಾಯಾಲಯ ಶಿಕ್ಷೆಯನ್ನು ನಿರ್ಧರಿಸಲಿ”ಎಂದಿದ್ದಾರೆ.
“ಸಿನಿಮಾದಲ್ಲಿ ‘ಶಕ್ತಿ ಕೇಂದ್ರ’ ಇಲ್ಲ. ಸಿನಿಮಾ ಅಂತಹವುಗಳಿರುವ ರಂಗವಲ್ಲ. ಪ್ರಾಯೋಗಿಕ ಕಾನೂನಿನ ಅಡೆತಡೆಗಳಿದ್ದಲ್ಲಿ ಹೇಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಅಂತಿಮವಾಗಿ, ಸಿನಿಮಾ ಉಳಿಯಬೇಕು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಸಂಘಟನೆ (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ಮತ್ತು ಅದರ ನಾಯಕತ್ವವು ಮೊದಲು ಪ್ರತಿಕ್ರಿಯಿಸಬೇಕು. ಅವರ ಪ್ರತಿಕ್ರಿಯೆಗಳ ನಂತರವೇ ನಾನು ಸದಸ್ಯನಾಗಿ ನನ್ನ ಅಭಿಪ್ರಾಯವನ್ನು ನೀಡಬೇಕು ಎಂದು ನಾನು ನಂಬುತ್ತೇನೆ, ಅದಕ್ಕಾಗಿಯೇ ನಾನು ಇಷ್ಟು ದಿನ ಕಾಯುತ್ತಿದ್ದೆ” ಎಂದು ಅವರು ಹೇಳಿದ್ದಾರೆ.
ಹೇಮಾ ಸಮಿತಿ ವರದಿ ಬೆಳಕಿಗೆ ಬಂದ ನಂತರ ನಿರ್ದೇಶಕ ರಂಜಿತ್, ನಟ ಜಯಸೂರ್ಯ ಮತ್ತು ನಟ- ರಾಜಕಾರಣಿ ಮುಖೇಶ್ ಸೇರಿದಂತೆ ಚಿತ್ರರಂಗದ ಹಲವಾರು ಖ್ಯಾತರ ವಿರುದ್ಧ ದೂರು ದಾಖಲಾಗಿದೆ.
ಈ ಸಮಿತಿ ವರದಿ ಬಂದ ಬಳಿಕ ಮಾಲಿವುಡ್ ಸಿನಿರಂಗದಲ್ಲಿ ಹಲವು ಮಹತ್ತರ ಬದಲಾವಣೆ ಆಗಿದೆ. ಮೋಹನ್‌ಲಾಲ್ ಅವರು ಅಮ್ಮಾ (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕೂಡ ಮಹತ್ವದ ಬದಲಾವಣೆ ಆಗಿದೆ.