ಸಿಯೋಲ್: ದಕ್ಷಿಣ ಕೊರಿಯಾದ ಖ್ಯಾತ ನಟ, ಆಸ್ಕರ್ ವಿಜೇತ ಸಿನಿಮಾದಲ್ಲಿ ನಟಿಸಿದ್ದ ಲೀ ಸನ್ ಕ್ಯೂನ್ ಬುಧವಾರ ಮುಂಜಾನೆ(ಡಿ.27 ರಂದು) ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸಿಯೋಲ್ ನಲ್ಲಿ ಕಾರಿನಲ್ಲಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದನ್ನು ಗಮನಸಿ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಇದು ಖ್ಯಾತ ನಟ ಲೀ ಸನ್ ಕ್ಯೂನ್ ಎಂದು ಗೊತ್ತಾಗಿದೆ.
ತನ್ನ ಪತಿ ಆತ್ಮಹತ್ಯೆಯ ಟಿಪ್ಪಣಿಯನ್ನು ಹೋಲುವ ಪತ್ರವೊಂದನ್ನು ಬರೆದು ಮನೆ ಬಿಟ್ಟು ಹೋಗಿರುವ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲೀ ಸನ್ ಕ್ಯೂನ್ ಅವರನ್ನು ಹುಡುಕಾಡುತ್ತಿದ್ದರು. ಇದೇ ವೇಳೆ ಪೊಲೀಸರಿಗೆ ಕಾರಿನಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಕರೆ ಬಂದಿದೆ.
ಕಳೆದ ಅಕ್ಟೋಬರ್ ನಲ್ಲಿ ಮಹಿಳೆಯೊಬ್ಬರು ಲೀ ಸನ್ ಕ್ಯೂನ್ ಅವರ ಮೇಲೆ ಡ್ರಗ್ಸ್ ಸೇವನೆಯ ಆರೋಪವನ್ನು ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದನ್ನು ನಟ ನಿರಾಕರಿಸಿದ್ದರು. ಇತ್ತೀಚೆಗ ನಾರ್ಕೋಟಿಕ್ಸ್ ತಜ್ಞರು ಮಂಪರು ಪರೀಕ್ಷೆ ನಡೆಸಿದ್ದರು, ಇದರಲ್ಲಿ ನಟನ ವರದಿ ನೆಗೆಟಿವ್ ಬಂದಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಅವರು ಶವವಾಗಿ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ವರದಿಯಾಗಿದೆ.
ಆಸ್ಕರ್ ಸಿನಿಮಾದಲ್ಲಿ ನಟಿಸಿದ್ದ ಲೀ ಸನ್ ಕ್ಯೂನ್: 2001 ರಲ್ಲಿ ಲೀ ʼಲವರ್ಸ್ʼ ಎನ್ನುವ ಟಿವಿ ಶೋ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ದಶಕಗಳಿಂದ ವೆಬ್ ಸಿರೀಸ್ ಹಾಗೂ ಸಿನಿಮಾದಲ್ಲಿ ನಟಿಸಿದ್ದ ಅವರು 2019 ರಲ್ಲಿʼಪ್ಯಾರಸೈಟ್ʼ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಗ್ರಹಣ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ʼಆಸ್ಕರ್ʼ ಗೆದ್ದುಕೊಂಡಿತು. ಅದೇ ಚಿತ್ರದಲ್ಲಿನ ಪಾತ್ರಕ್ಕಾಗಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನು ಗೆದ್ದಿದ್ದರು.
ಕಳೆದ ವರ್ಷ ವೈಜ್ಞಾನಿಕ ಥ್ರಿಲ್ಲರ್ ಡಾ. ಬ್ರೈನ್‌ನಲ್ಲಿನ ಅವರ ಅಭಿನಯಕ್ಕಾಗಿ ಅವರು ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿಗೆ ಅತ್ಯುತ್ತಮ ನಟರಾಗಿ ನಾಮನಿರ್ದೇಶನಗೊಂಡಿದ್ದರು.
ʼಕಾಫಿ ಪ್ರಿನ್ಸ್ʼ (2007), ಮತ್ತು ಮೆಡಿಕಲ್ ಡ್ರಾಮಾ ʼಬಿಹೈಂಡ್ ದಿ ವೈಟ್ ಟವರ್ʼ, ʼಪಾಸ್ಟಾʼ (2010) ಮತ್ತು ʼಮೈ ಮಿಸ್ಟರ್ʼ (2018) ಮುಂತಾದ ಸಿನಿಮಾದಲ್ಲಿ ನಟಿಸಿ ಹೆಸರು ಗಳಿಸಿದ್ದರು.