ನಟ ಕೋಮಲ್ ಖುಷಿಯಾಗಿದ್ದಾರೆ. ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ ಅವರ ಖಡಕ್ ಲುಕ್ ಮತ್ತು ಅದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ನಿಮಗೆ ಗೊತ್ತಿರುವಂತೆ ಇತ್ತೀಚೆಗೆ ಒಂದೆರಡು ವರ್ಷಗಳಿಂದ ಚಿತ್ರರಂಗದಿಂದ ದೂರವೇ ಇದ್ದರು. ನಟ ಕೋಮಲ್ ಚಿತ್ರರಂಗ ಬಿಟ್ಟೆ ಬಿಟ್ರಾ? ಹೀಗೆ ಗಾಂಧಿನಗರ ಹಾಗೂ ಸಿನಿಮಂದಿ ಕೇಳುವ ಮಟ್ಟಕ್ಕೆ ಕೋಮಲ್ ಚಿತ್ರರಂಗದಿಂದ ದೂರ ಉಳಿದಿದ್ದರು.
ಅದಕ್ಕೆ ಕಾರಣ “ಕೆಂಪೇಗೌಡ-2′ ಚಿತ್ರ. ಹೊಸ ಇಮೇಜಿಗೆ ಹೊಂದಿಕೊಳ್ಳಬೇಕೆಂದು ಕೋಮಲ್ ಒಪ್ಪಿಕೊಂಡ ಸಿನಿಮಾ “ಕೆಂಪೇಗೌಡ-2′. ಆರಂಭದಲ್ಲಿ ಅದ್ಧೂರಿಯಾಗಿ ಸೆಟ್ಟೇರಿ, ಭರ್ಜರಿ ಸುದ್ದಿ ಮಾಡಿದ ಈ ಚಿತ್ರ ಆ ನಂತರ ನಿಧಾನವಾಗುತ್ತಾ ಹೋಯಿತು. ಇನ್ನೇನು ಆ ಸಿನಿಮಾ ನಿಂತೇ ಹೋಯಿತು ಎನ್ನುವಷ್ಟರಲ್ಲಿ ಕೋಮಲ್ ಸದ್ದು ಮಾಡಿದ್ದಾರೆ. ಅದು ಚಿತ್ರದ ಟ್ರೇಲರ್ ಮೂಲಕ.
ಹೌದು, ಕೋಮಲ್ ಅಭಿನಯದ “ಕೆಂಪೇಗೌಡ-2′ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಇಷ್ಟು ದಿನ ನೋಡಿದ ಕೋಮಲ್‌ಗೂ “ಕೆಂಪೇಗೌಡ-2′ ಚಿತ್ರದಲ್ಲಿ ಕಾಣಿಸಿಕೊಂಡ ಕೋಮಲ್‌ಗೂ ಅಜಗಜಾಂತರ ವ್ಯತ್ಯಾಸವಿದೆ. ಸಖತ್ ಮಾಸ್ ಲುಕ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿರುವ ಕೋಮಲ್ ಅವರ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈ ಚಿತ್ರದ ಮೂಲಕ ಕೋಮಲ್ ಮತ್ತೆ ಚಿತ್ರರಂಗದಲ್ಲಿ ಬಿಝಿಯಾಗುವ ಸೂಚನೆ ಸಿಕ್ಕಿದೆ.
ಅದ್ಧೂರಿಯಾಗಿ ಮೂಡಿಬಂದಿರುವ “ಕೆಂಪೇಗೌಡ-2′ ಚಿತ್ರದ ಮೇಲೆ ಕೋಮಲ್‌ಗೆ ಸಾಕಷ್ಟು ನಿರೀಕ್ಷೆ ಇದೆ. ಇಷ್ಟು ದಿನ ಕಾದಿದ್ದಕ್ಕೆ ಈ ಚಿತ್ರ ಫಲ ನೀಡುತ್ತದೆ ಎಂಬ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ ಕೋಮಲ್. “ಚಿತ್ರದ ಟ್ರೇಲರ್‌ಗೆ ಎಲ್ಲಾ ಕಡೆಗಳಿಂದಲೂ ಅದ್ಭುತವಾದ ಪ್ರತಿಕ್ರಿಯೆ ಸಿಗುತ್ತಿದೆ. ಪ್ರೇಕ್ಷಕರು ಸಿನಿಮಾವನ್ನು ಇದೇ ರೀತಿ ಸ್ವೀಕರಿಸುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಕೋಮಲ್ ಮಾತು. ಈ ನಡುವೆಯೇ ಕೋಮಲ್ ಹೊಸ ಸಿನಿಮಾದ ಮಾತುಕತೆ ಕೂಡಾ ನಡೆಯುತ್ತಿದೆ.