ಇಂದೋರ್ ನಲ್ಲಿದ್ದ ಈ ಕುಟುಂಬ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿತ್ತು. ತಂದೆ ಕೆಲಸ ಮಾಡುತ್ತಿದ್ದ ಮಿಲ್ ಬಾಗಿಲು ಮುಚ್ಚಿದ್ದರಿಂದ ಹೊಟ್ಟೆಪಾಡಿಗಾಗಿ ತಂದೆ,ತಾಯಿ ಮಕ್ಕಳನ್ನು ಕರೆದುಕೊಂಡು ಬಂದಿದ್ದು ಮಾಯಾನಗರಿ ಮುಂಬೈಗೆ. ಹತ್ತು ಮಕ್ಕಳನ್ನು ಸಾಕಿ, ಬೆಳೆಸುವ ಹೊಣೆಗಾರಿಕೆ ಕುಟುಂಬದ ಮೇಲಿತ್ತು. ಈ ಮಕ್ಕಳಲ್ಲಿ 2ನೇಯವರು ಬದ್ರುದ್ದೀನ್ ಜಮಾಲುದ್ದೀನ್ ಕಾಝಿ. ಬದುಕಿನ ಜಟಕಾ ಬಂಡಿ ಮುಂದೆ ಸಾಗಲು ಬದ್ರುದ್ದೀನ್ ಮುಂಬೈ ನಗರಿಯಲ್ಲಿ ಐಸ್ ಕ್ಯಾಂಡಿ, ಹಣ್ಣು, ತರಕಾರಿ ಮಾರಾಟ ಮಾಡುವ ಕೆಲಸ ಮಾಡಿದರು. ಕೊನೆಗೆ ಕೈ ಹಿಡಿದದ್ದು ಬೆಸ್ಟ್ (ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ ಫೋರ್ಟ್) ಕಂಡಕ್ಟರ್ ಕೆಲಸ. ಈ ವ್ಯಕ್ತಿ ಬೇರಾರು ಅಲ್ಲ ಹಿಂದಿ ಚಿತ್ರರಂಗವನ್ನು ಆಳಿದ್ದ ಖ್ಯಾತ ಹಾಸ್ಯ ನಟ ಜಾನಿವಾಕರ್!
ಬಸ್ ಕಂಡಕ್ಟರ್ ಆಗಿ ಪ್ರಯಾಣಿಕರನ್ನು ನಕ್ಕು ನಗಿಸುತ್ತಲೇ ಟಿಕೆಟ್ ಕೊಡುವ ಶೈಲಿ ಎಲ್ಲರನ್ನೂ ಮೋಡಿ ಮಾಡಿಬಿಟ್ಟಿತ್ತು. ಬಸ್ ಸ್ಟಾಪ್ ಗಳ ಹೆಸರನ್ನು ಹೇಳುತ್ತಿದ್ದ ರೀತಿಯೂ ಕೂಡಾ ವಿಭಿನ್ನ ಶೈಲಿಯದ್ದಾಗಿತ್ತು. ಹೀಗೆ ಒಂದು ದಿನ ಬೆಸ್ಟ್ ಬಸ್ ನಲ್ಲಿ ಖ್ಯಾತ ನಟ, ಸಂಭಾಷಣೆಕಾರ ಬಲ್ ರಾಜ್ ಸಾಹ್ನಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಕೊಡುತ್ತಿದ್ದ ಬದ್ರುದ್ದೀನ್ ನಗಿಸುವ ಶೈಲಿ ಗಮನಸೆಳೆದಿತ್ತು. ಈ ಸಂದರ್ಭದಲ್ಲಿ ಸಾಹ್ನಿ ಬಾಜಿ ಸಿನಿಮಾದ ಸಂಭಾಷಣೆ ಬರೆಯುತ್ತಿದ್ದರು. ಅಲ್ಲಿಂದ ಬದ್ರುದ್ದೀನ್ ಬದುಕಿನ ದಿಕ್ಕೇ ಬದಲಾಯಿತು.
ಜಾನಿವಾಕರ್ ಆಗಿದ್ದು ಹೇಗೆ ಗೊತ್ತಾ?
ಬಸ್ ಕಂಡಕ್ಟರ್ ಬದ್ರುದ್ದೀನ್ ಎಂಬ ಯುವಕನನ್ನು ಸಾಹ್ನಿ ಅವರು ಕರೆದೊಯ್ದು ನಿಲ್ಲಿಸಿದ್ದು ಅಂದಿನ ಖ್ಯಾತ ನಿರ್ದೇಶಕ ಗುರುದತ್ ಮುಂದೆ! ತನ್ನ ಸಿನಿಮಾಕ್ಕೆ ಉತ್ತಮ ಹಾಸ್ಯ ನಟನೊಬ್ಬನ ಹುಡುಕಾಟದಲ್ಲಿದ್ದ ದತ್, ಬದ್ರುದ್ದೀನ್ ಅವರ ಆಡಿಷನ್ ನಡೆಸುತ್ತಾರೆ. ಆಗ ಕುಡುಕನ ಪಾತ್ರದಲ್ಲಿ ನಟಿಸಿ ತೋರಿಸುವಂತೆ ಹೇಳಿದ್ದರು. ಹಿಂದೆ, ಮುಂದೆ ನೋಡದೆ ಮದ್ಯ ಸೇವಿಸದೆಯೇ ಲೀಲಾಜಾಲವಾಗಿ ಬದ್ರುದ್ದೀನ್ ನಟಿಸಿ ತೋರಿಸಿದಾಗ ದತ್ ನಿಬ್ಬೆರಗಾಗಿ ಹೋಗಿದ್ದರಂತೆ! ಅಂತಿಮ ಹಂತದಲ್ಲಿದ್ದ ಬಾಜಿ ಸಿನಿಮಾದ ಕಥೆಗೆ ಈ ಪಾತ್ರವನ್ನು ಸೇರಿಸಿ, ದತ್ ಅವರ ಫೇವರಿಟ್ ಜಾನಿ ವಾಕರ್ ವಿಸ್ಕಿಯ ಹೆಸರನ್ನೇ ಬದ್ರುದ್ದೀನ್ ಗೆ ಇಟ್ಟುಬಿಟ್ಟಿದ್ದರು. 1951ರಲ್ಲಿ ದತ್ ನಿರ್ದೇಶನದ ಬಾಜಿ ಸಿನಿಮಾದಲ್ಲಿ ಜಾನಿವಾಕರ್ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಜಾನಿವಾಕರ್ ಹಿಂದಿ ಚಿತ್ರರಂಗದ ಮೇರು ಹಾಸ್ಯನಟನಾಗಿ ಮಿಂಚಿದ್ದರು.
ತುಂಬಾ ಕುತೂಹಲದ ವಿಷಯ ಏನೆಂದರೆ “ಜಾನಿ ವಾಕರ್” ಹೆಸರನ್ನಿಟ್ಟುಕೊಂಡು ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ ಅವರು ನಿಜಜೀನವದಲ್ಲಿ ಒಮ್ಮೆಯೂ ಮದ್ಯವನ್ನು ಸೇವಿಸಿದವರಲ್ಲ. ಆದರೆ ಅವರ ಕುಡುಕನ ಪಾತ್ರದ ನಟನೆ ನೋಡಿದರೆ ಈ ವ್ಯಕ್ತಿ ಕುಡುಕನೇ ಇರಬೇಕು ಎಂಬಷ್ಟರ ಮಟ್ಟಿಗೆ ಜಾನಿ ಪಾತ್ರ ಎಲ್ಲರನ್ನೂ ನಿಬ್ಬೆರಗಾಗಿಸಿದ್ದು ಸುಳ್ಳಲ್ಲ. 40 ವರ್ಷಗಳ ಮೊದಲೇ ಜಾನಿ ಅವರು ಶ್ರೀಮತಿ 420 ಸಿನಿಮಾದಲ್ಲಿ ನಟಿಸಿದ್ದರು. ತದನಂತರ 1997ರಲ್ಲಿ ಕಮಲ್ ಹಾಸನ್ ಅವರು ಕೊನೆಯದಾಗಿ ಅವಕಾಶ ಮಾಡಿಕೊಟ್ಟ ಸಿನಿಮಾ ಚಾಚಿ 420 ಸಿನಿಮಾದಲ್ಲೂ ಜಾನಿ ವಾಕರ್ ಅಭಿನಯಿಸಿದ್ದು ಕಾಕತಾಳಿಯವೇ ಇರಬೇಕು!
1950 ಮತ್ತು 1960ರ ದಶಕದಲ್ಲಿ ಜಾನಿ ವಾಕರ್ ಅತ್ಯಂತ ಜನಪ್ರಿಯ ಹಾಗೂ ಬಿಡುವಿಲ್ಲದ ಹಾಸ್ಯ ನಟರಾಗಿದ್ದರು. 1957ರಲ್ಲಿ ಅವರದ್ದೇ ಹೆಸರಿನಲ್ಲಿ(ಜಾನಿ ವಾಕರ್) ಸಿನಿಮಾ ತೆರೆಕಂಡಿತ್ತು. ಇದರಲ್ಲಿ ಜಾನಿ ವಾಕರ್ ಹಾಗೂ ಶ್ಯಾಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1956ರ ಛೂ ಮಂತರ್, 1958ರಲ್ಲಿ ತೆರೆಕಂಡಿದ್ದ ಮಿ.ಕಾರ್ಟೂನ್ ಎಂ.ಎ. ಸಿನಿಮಾದಲ್ಲಿ ಜಾನಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು.
ಮುಂಬೈನ ಬಾಂದ್ರಾದ ಪಾರೈ ಕ್ರಾಸ್ ರಸ್ತೆ ಸಮೀಪ ಜಾನಿ ಅವರ ಮನೆ(ನೂರ್ ವಿಲ್ಲಾ) ಇತ್ತು. ಇದು ಜಾನಿ ವಾಕರ್ ಬಸ್ ಸ್ಟಾಪ್ ಎಂದೇ ಫೇಮಸ್ ಆಗಿತ್ತಂತೆ! 1958ರಲ್ಲಿ ಬಿಡುಗಡೆಯಾಗಿದ್ದ ಬಿಮಲ್ ರಾಯ್ ಅವರ ಮಧುಮತಿ ಚಿತ್ರದಲ್ಲಿನ ನಟನೆಗಾಗಿ ಜಾನಿ ವಾಕರ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದರು. 1968ರಲ್ಲಿ ಶಿಕಾರ್ ಚಿತ್ರದಲ್ಲಿ ಬೆಸ್ಟ್ ಕಾಮಿಡಿಯನ್ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕೀರ್ತಿ ಜಾನಿ ಅವರದ್ದು.
ಹಾಸ್ಯ ನಟರಾಗಿ ಉತ್ತುಂಗದಲ್ಲಿದ್ದಾಗಲೇ ತಮ್ಮ ಮೇಲೆ ಅತಿಯಾಗಿ ಪ್ರಭಾವ ಬೀರಿದ್ದ ನಿರ್ದೇಶಕ ಗುರು ದತ್ ಅವರ ನಿಧನ ಬಳಿಕ ಜಾನಿ ವಾಕರ್ ಏಕಾಂಗಿಯಾಗಿದ್ದರು. 1980ರ ಹೊತ್ತಿಗೆ ಸಿನಿಮಾದಲ್ಲಿ ಅಶ್ಲೀಲ ಹೆಚ್ಚಾಯಿತೆಂದು ನಟನೆಯಿಂದ ದೂರವೇ ಉಳಿದು ಬಿಟ್ಟರು. ಸುದೀರ್ಘ 14 ವರ್ಷಗಳ ನಂತರ (ಚಾಚಿ 420 ಸಿನಿಮಾದಲ್ಲಿ) ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದರು. ತನ್ನ ಹೆಸರಿನಲ್ಲಿಯೇ ಸಿನಿಮಾವಾಗಿದ್ದ ಏಕೈಕ ಹಾಸ್ಯ ನಟ, ತನ್ನ ಜೊತೆ ಕಾರ್ಯದರ್ಶಿ ಇಟ್ಟುಕೊಂಡಿದ್ದ ಮೊದಲ ನಟರಾಗಿದ್ದರು. ಜಾನಿ ವಾಕರ್ ನೂರ್ ಜಹಾನ್ ಅವರನ್ನು ವಿವಾಹವಾಗಿದ್ದರು. ವಾಕರ್ ದಂಪತಿಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು. ಮಗ ನಾಸಿರ್ ಖಾನ್ ಹಿಂದಿ ಸೋಪ್ ಓಪೆರಾದ ಓರ್ವ ನಟರಾಗಿದ್ದಾರೆ.
2003ರ ಜುಲೈ 29ರಂದು ಜಾನಿ ವಾಕರ್ ಇಹಲೋಕ ತ್ಯಜಿಸಿದ್ದರು. “ಜಾನಿ ವಾಕರ್” ಎಂಬ ಹೆಸರಿನೊಂದಿಗೆ ಕುಡುಕನ ಪಾತ್ರದ ಮೂಲಕವೇ ಮಿಂಚಿದ್ದ ಜಾನಿ ಮದ್ಯಪರಿತ್ಯಾಗಿ(teetotaler) ಎಂದೇ ಹೆಸರಾಗಿದ್ದರು.