Advertisement

ಜೈಲು ಸೇರಿದ ನಟ ದುನಿಯಾ ವಿಜಯ್‌

06:00 AM Sep 24, 2018 | |

ಬೆಂಗಳೂರು: ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಚಿತ್ರನಟ “ದುನಿಯಾ’ವಿಜಯ್‌ ಜೈಲು ಸೇರಿದ್ದಾರೆ.ಜಿಮ್‌ ತರಬೇತುದಾರ ಮಾರುತಿ ಗೌಡ ಎಂಬುವರನ್ನು ಅಪಹರಿಸಿ ಹಲ್ಲೆ ನಡೆಸಿದಆರೋಪ ಪ್ರಕರಣದಲ್ಲಿ ವಿಜಯ್‌ ಸೇರಿ ನಾಲ್ವರು ಆರೋಪಿಗಳಿಗೆ  14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಾಧೀಶರು ಭಾನುವಾರು ಆದೇಶಿಸಿದ್ದಾರೆ.

Advertisement

ಪ್ರಕರಣ ಸಂಬಂಧ ವಿಜಯ್‌, ಪ್ರಸಾದ್‌,ಮಣಿ, ಕಾರು ಚಾಲಕ ಪ್ರಸಾದ್‌ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು,
ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಶನಿವಾರ ತಡರಾತ್ರಿ ಅಂಬೇಡ್ಕರ್‌ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್‌ ಸ್ಪರ್ಧೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾರುತಿ ಗೌಡನ ಜತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ನಟ ವಿಜಯ್‌, ಅವರ ಸ್ನೇಹಿತರಾದ ಪ್ರಸಾದ್‌, ಮಣಿ ಎಂಬುವ ವರು ಸೇರಿ ಮಾರುತಿಗೌಡನನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಪ್ರಕರಣ ಸಂಬಂಧ ಶನಿವಾರ ತಡರಾತ್ರಿಯೇವಿಜಯ್‌ ಹಾಗೂ ಇತರೆ ಆರೋಪಿಗಳನ್ನು ಬಂಧಿಸಿ ಸುದೀರ್ಘ‌ ವಿಚಾರಣೆ ನಡೆಸಲಾಗಿದೆ.

ಅಂತಾರಾಷ್ಟ್ರೀಯ ದೇಹದಾಡ್ಯì ಪಟು ಪಾನಿಪುರಿ ಕಿಟ್ಟಿ ಜತೆಗಿನ ಹಳೇ ವೈಮನಸ್ಸಿಗೆ ಸಂಬಂಧಿಸಿದಂತೆ ಆತನ ಸಹೋದರನ ಮಗ ಮಾರುತಿ ಗೌಡ ಜತೆ ಜಗಳ ತೆಗೆದು ಹಲ್ಲೆನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಮಧ್ಯೆ, ಮಾರುತಿಗೌಡನ ಮೇಲೆ ನನ್ನ ಅಭಿಮಾನಿಗಳು ಹಲ್ಲೆ ನಡೆಸಿದ್ದು ಆತನನ್ನು ರಕ್ಷಿಸಲು ಮುಂದಾಗಿದ್ದೆ. ಅದಕ್ಕಾಗಿ ಕಾರಿನಲ್ಲಿ ಕರೆದೊಯ್ಯಲಾಯಿತು. ಆತನ ಮೇಲೆ ನಾನು ಹಲ್ಲೆ ನಡೆಸಿಲ್ಲ ಎಂದು ವಿಜಯ್‌ ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಇದರೊಂದಿಗೆ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್‌ 4 ತಿಂಗಳಲ್ಲಿ ಬಂಧನಕ್ಕೊಳಗಾಗಿರುವುದು ಇದು 2ನೇ ಬಾರಿ. ನಿರ್ಮಾಪಕ ಸುಂದರ್‌ ಗೌಡ ಎಂಬುವರನ್ನು ಬಂಧಿಸಲು ತಾವರೆಕೆರೆ ಠಾಣೆ ಪೊಲೀಸ್‌ ಸಿಬ್ಬಂದಿ ತೆರಳಿದಾಗ
ಅವರ ಮೇಲೆ ಹಲ್ಲೆ ನಡೆಸಿ ಸುಂದರ್‌ಗೌಡ ಪರಾರಿಯಾಗಲು ಸಹಕರಿಸಿದ್ದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು.

Advertisement

ಬಾಡಿ ಬಿಲ್ಡಿಂಗ್‌ ಸ್ಪರ್ಧೆ ವೇಳೆ ಕಿರಿಕ್‌: ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ “32ನೇ ಅಮೇಚೂರ್‌ ಬಾಡಿ ಬಿಲ್ಡಿಂಗ್‌
ಚಾಂಪಿಯನ್‌ ಶಿಪ್‌, ಮಿಸ್ಟರ್‌ ಬೆಂಗಳೂರು-2018′ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ನಟ ವಿಜಯ್‌ ಆಗಮಿಸಿದ್ದರು.

ಇದೇ ಕಾರ್ಯಕ್ರಮಕ್ಕೆ ಅಂ.ರಾ. ಖ್ಯಾತಿಯ ದೇಹದಾಡ್ಯì ಪಟು ಪಾನಿಪುರಿ ಕಿಟ್ಟಿಯ ಸಂಬಂಧಿ ಮಾರುತಿ ಗೌಡ ಆಗಮಿಸಿದ್ದರು. ಈ ವೇಳೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವಿಜಯ್‌ ಸ್ನೇಹಿತ ಪ್ರಸಾದ್‌ ಹಾಗೂ ಮಣಿ ಜತೆ ಮಾರುತಿ ಗೌಡ ಜಗಳವಾಡಿದ್ದಾರೆ.

ವಿಜಯ್‌ ಸೇರಿ ಎಲ್ಲರೂ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ರಾತ್ರಿ 10.30ರ ಸುಮಾರಿಗೆ ಮಾರುತಿ ಗೌಡನನ್ನು ಕಾರಿನಲ್ಲಿ ಅಪಹರಿಸಿದ ವಿಜಯ್‌ ಹಾಗೂ ಇತರರು ತಲೆ ಹಾಗೂ ಮುಖಕ್ಕೆ ಹೊಡೆದಿದ್ದು, ರಾಜರಾಜೇಶ್ವರಿ ನಗರದ ಕಡೆ ಕರೆದೊಯ್ದಿದ್ದಾರೆ. ಈ ವಿಚಾರ ತಿಳಿದು ಶೇಷಾದ್ರಿಪುರ ಉಪವಿಭಾಗದ ಎಸಿಪಿ ರವಿಶಂಕರ್‌, ವಿಜಯ್‌ಗೆ ಕರೆ ಮಾಡಿ ಕೂಡಲೇ ಮಾರುತಿ ಗೌಡ ಅವರೊಂದಿಗೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ಬರುವಂತೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮೆತ್ತಗಾದ ವಿಜಯ್‌ ಹಾಗೂ ಸ್ನೇಹಿತರು ಅರ್ಧಗಂಟೆಯಲ್ಲಿ ಹೈಗ್ರೌಂಡ್ಸ್‌ ಠಾಣೆಗೆ ಬಂದಿದ್ದು, ಪೊಲೀಸರು ಬಂಧಿಸಿದ್ದಾರೆ. ವಿಷಯ ತಿಳಿದ ಕೂಡಲೇ ಪಾನಿಪುರಿ ಕಿಟ್ಟಿ ಹಾಗೂ ಇತರರು ಠಾಣೆಗೆ ಆಗಮಿಸಿದ್ದು, ಈ ವೇಳೆ ಪೊಲೀಸರ ಸಮ್ಮುಖದಲ್ಲೇ ವಿಜಯ್‌ ಜತೆ ಮಾತಿನ ಚಕಮಕಿ ನಡೆದಿದೆ. ಶನಿವಾರ ರಾತ್ರಿಯಿಡೀ ಹ್ರೈಗ್ರೌಂಡ್ಸ್‌ ಠಾಣೆಯಲ್ಲಿದ್ದವಿಜಯ್‌ ಹಾಗೂ ಇತರೆ ಆರೋಪಿಗಳನ್ನು ನಂತರ ವೈಯಾಲಿಕಾವಲ್‌ ಪೊಲೀಸ್‌ ಠಾಣೆಗೆ ಸ್ಥಳಾಂತರಿಸಿ ಎಸಿಪಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು. ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿದೂರು: ವಿಜಯ್‌, ಪಾನಿಪೂರಿ ಕಿಟ್ಟಿ ಬೆಂಬಲಿಗರು ವಿನಾಕಾರಣ ಜಗಳವಾಡಿ ಕಾರು ಜಖಂಗೊಳಿಸಿದ್ದಾರೆ ಎಂದು ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ. ಈ ಕುರಿತು ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2ನೇ ಪತ್ನಿ ವಿರುದ್ಧ ಎಫ್ಐಆರ್‌
ಈ ಮಧ್ಯೆ, ದುನಿಯಾ ವಿಜಯ್‌ ಅವರ ಮೊದಲ ಪತ್ನಿ ನಾಗರತ್ನ ನೀಡಿದ ದೂರಿನ ಅನ್ವಯ 2ನೇ ಪತ್ನಿ ಕೀರ್ತಿ ಪಟ್ವಾಡಿ ಹಾಗೂ ಮತ್ತಿತರರ ವಿರುದ್ಧ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

“ನಾನು ಭಾನುವಾರ ಕೀರ್ತಿ ಪಟ್ವಾಡಿ ನಿವಾಸದ ಬಳಿ ತೆರಳಿ, ನನ್ನ ಮಗ ಸಾಮ್ರಾಟ್‌ನನ್ನು ಹೇಳದೆ ಕೇಳದೆ ಎಲ್ಲೆಂದರಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ. ಮಗನನ್ನು ಮನೆಗೆ ಕಳುಹಿಸಿ  ಕೊಡಿ’ ಎಂದು ಹೇಳಿದ್ದಕ್ಕೆ ಕೀರ್ತಿ ಪಟ್ವಾಡಿ ಬೌನ್ಸರ್‌ಗಳ ಮೂಲಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ನಾಗರತ್ನ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.

ಅದರಂತೆ ಕೀರ್ತಿ ಪಟ್ವಾಡಿ ಮತ್ತಿತರರ ವಿರುದಟಛಿ ಎಫ್ಐಆರ್‌ ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ದೂರಿನ ಸಂಬಂಧ ಕೀತಿ ಪಟ್ವಾಡಿ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು, ಮತ್ತೆ ಕೌಟುಂಬಿಕ ವಿಚಾರಗಳಿಗೆ ಜಗಳ ಮಾಡಿಕೊಳ್ಳದಂತೆ ಸಲಹೆ ನೀಡಿ ಕಳುಹಿಸಿದ್ದಾರೆ.

ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ
ಹಲ್ಲೆಗೊಳಗಾಗಿರುವ ಮಾರುತಿಗೌಡನ ತುಟಿಗೆ ಪೆಟ್ಟಾಗಿದ್ದು, ಮೂರು ಹೊಲಿಗೆ ಹಾಕಲಾಗಿದೆ. ಆತನಿಗೆ ವಿಕ್ರಂ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಾರುತಿಗೌಡನಿಂದ ಪ್ರಕರಣ ಕುರಿತು ಹೇಳಿಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ಮಧ್ಯಾಹ್ನ ಸಭೆ ನಡೆಯಲಿದೆ.ಸಭೆಯಲ್ಲಿ ವಿಜಯ್‌ ವಿಷಯ ಚರ್ಚೆ ಮಾಡಲಿದ್ದೇವೆ. ಆದರೆ, ಯಾರೂ ಮಂಡಳಿಗೆ ದೂರು ನೀಡಿಲ್ಲ. ಹಾಗಾಗಿ,ಮಂಡಳಿ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ.ಯಾರಾದರೂ ದೂರು ನೀಡಿದ್ದಲ್ಲಿ, ಆ ಸಂಬಂಧ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು.
– ಎಸ್‌.ಎ.ಚಿನ್ನೇಗೌಡ, ವಾಣಿಜ್ಯ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next