– ಹುಡುಗಿ ತುಂಬಾ ವಿಶ್ವಾಸದಿಂದಲೇ ಈ ಮಾತನ್ನು ಹೇಳಿದಂತಿತ್ತು. ಅದಕ್ಕೆ ಸರಿಯಾಗಿ ಸಿನಿಮಾ ನನ್ನ ಅಪ್ಶನ್, ಅದನ್ನು ಮೀರಿದ ಸಾಕಷ್ಟು ಕೆಲಸಗಳನ್ನು ನಾನು ಮಾಡಬೇಕಿದೆ ಎಂಬಂತಹ ಒಂದು ಕನಸು ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಈಗಷ್ಟೇ ಒಂದು ಸಿನಿಮಾ ಮಾಡಿಮುಗಿಸಿದ ಆ ಹುಡುಗಿ ಅಷ್ಟೊಂದು ಧೈರ್ಯವಾಗಿ ಮಾತನಾಡಲು ಕಾರಣ ಆಕೆಯ ಹಿನ್ನೆಲೆ. ಮೊದಲನೇಯದಾಗಿ ರಂಗಭೂಮಿ ಕಲಿಸಿಕೊಟ್ಟ ಪಾಠ ಒಂದೆಡೆಯಾದರೆ, ರಂಗ ಹಾಗೂ ಮನೆಯಲ್ಲಿ ಬೆನ್ನೆಲುಬಾಗಿ ನಿಂತ ಅಪ್ಪ ಇನ್ನೊಂದೆಡೆ. ನಾವು ಹೇಳುತ್ತಿರುವುದು ದಿಶಾ ರಮೇಶ್ ಬಗ್ಗೆ. ನಟ, ರಂಗಭೂಮಿಯ ದೊಡ್ಡ ಹೆಸರು ಮಂಡ್ಯ ರಮೇಶ್ ಮಗಳೇ ಈ ದಿಶಾ ರಮೇಶ್. ಇತ್ತೀಚೆಗಷ್ಟೇ ತೆರೆಕಂಡ “ದೇವರ ನಾಡಲ್ಲಿ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ದಿಶಾಗೆ ಈಗ ಸಾಕಷ್ಟು ಆಫರ್‌ಗಳಿವೆ. ಹಾಗಂತ ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಕಣ್ಣಿಗೆ ಒತ್ತಿಕೊಂಡು ಒಪ್ಪಿಕೊಳ್ಳುವ ಹುಡುಗಿ ದಿಶಾ ಅಲ್ಲ. ಅದಕ್ಕೆ ಕಾರಣ ದಿಶಾ ಕನಸುಗಳು ಮತ್ತು ಆಕೆಯ ಹಿನ್ನೆಲೆ.
Advertisement
“ಅಪ್ಪ ರಂಗಭೂಮಿಯಲ್ಲಿದ್ದರಿಂದ ನನಗೂ ಚಿಕ್ಕಂದಿನಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳೆಯಿತು. ಇಲ್ಲಿವರೆಗೆ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆ. ಅದು ನಿಮ್ಮನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿಸುತ್ತದೆ. ನನಗೆ ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂಬ ಆಸೆ ಇಲ್ಲ. ಅಷ್ಟಕ್ಕೂ “ದೇವರನಾಡಲ್ಲಿ’ ಆಫರ್ ಸಿಕ್ಕಿದ್ದು ನನ್ನ ನಾಟಕ ನೋಡಿ. ಅಪ್ಪ ನಿರ್ದೇಶಿಸಿದ “ಚಾಮ ಚೆಲುವೆ’ ನಾಟಕದಲ್ಲಿ ಕೊರವಂಜಿ ಪಾತ್ರ ಮಾಡಿದ್ದೆ. ಒಮ್ಮೆ ಆ ನಾಟಕ ಪ್ರದರ್ಶನ ವೀಕ್ಷಿಸಿದ ನಿರ್ದೇಶಕ ಬಿ.ಸುರೇಶ, ತಮ್ಮ “ದೇವರ ನಾಡಲ್ಲಿ’ ಚಿತ್ರಕ್ಕೆ ಅವಕಾಶ ಕೊಟ್ಟರು. ಮಂಡ್ಯ ರಮೇಶ್ ಪುತ್ರಿ ಎಂಬ ಕಾರಣಕ್ಕೆ ಆ ಅವಕಾಶ ಸಿಕ್ಕಿರಲಿಲ್ಲ. ಕೊರವಂಜಿ ಪಾತ್ರದ ಮೂಲಕ ಗಮನಸೆಳೆದ ಹುಡುಗಿ ಅನ್ನುವ ಕಾರಣಕ್ಕೆ ಆ ಅವಕಾಶ ಸಿಕ್ಕಿತ್ತು. ಮೊದಲು ಈ ಪಾತ್ರ ಮಾಡಲು ನನ್ನಿಂದ ಸಾಧ್ಯನಾ ಎಂಬ ಭಯವಿತ್ತು. ಏಕೆಂದರೆ ರಂಗಭೂಮಿಯಲ್ಲಾದರೆ ನಮ್ಮ ನಟನೆ ಇಷ್ಟವಾದರೆ ಅಲ್ಲೇ ಚಪ್ಪಾಳೆ, ಶಿಳ್ಳೆ ಬೀಳುತ್ತದೆ. ಆದರೆ ಕ್ಯಾಮರಾ ಮುಂದೆ ನಟಿಸುವಾಗ ಏನೂ ಗೊತ್ತಾಗಲ್ಲ. ಹಾಗಾಗಿ, ಕೊಂಚ ಭಯವಾಯಿತು. ಆದರೆ, ಅಪ್ಪ ನನಗೆ ಧೈರ್ಯ ತುಂಬಿದ್ದರು. ಏನೇ ಮಾಡೋದಾದರೂ ನಂಬಿಕೆ ಇಟ್ಟು ಮಾಡುವ, ಇಲ್ಲಾಂದ್ರೆ ನಿನ್ನ ಪಾತ್ರದಲ್ಲಿ ಅಸಹಜತೆ ಕಾಡುತ್ತೆ ಎಂಬ ಕಿವಿಮಾತು ಹೇಳಿದ್ದರು. ರಂಗಭೂಮಿಯಲ್ಲಿ ಮೊದಲು ಹೇಳಿಕೊಡೋದೇ ಅದನ್ನು. ಮಾಡುವ ಪಾತ್ರದ ಮೇಲೆ ನಂಬಿಕೆ ಇಟ್ಟು ಮಾಡಬೇಕು. ಇಲ್ಲದಿದ್ದರೆ ಪ್ರೇಕ್ಷಕರಿಗೆ ಇವರು ನಟನೆಯಲ್ಲಿ ಸಹಜತೆ ಇಲ್ಲ ಎಂಬ ಭಾವನೆ ಬರುತ್ತದೆ. ಹಾಗಾಗಿ, ಸಿನಿಮಾದಲ್ಲೂ ನಂಬಿಕೆ ಇಟ್ಟು ಮಾಡಿದೆ. ಸಿನಿಮಾ ಬಿಡುಗಡೆಯಾದ ಮೇಲೆ ನನ್ನ ಪಾತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು’ ಎನ್ನುವುದು ದಿಶಾ ಮಾತು. “ದೇವರ ನಾಡಲ್ಲಿ’ ಚಿತ್ರದ ಶೂಟಿಂಗ್ ಅನುಭವ ಹಂಚಿಕೊಳ್ಳುವ ದಿಶಾ, “ಸಾಮಾನ್ಯವಾಗಿ ನಾನು ಹೋದ ಕಡೆ ಎಲ್ಲೂ ಫ್ರೆಂಡ್ಲಿಯಾಗಿ ಇರೋದಿಲ್ಲ. ಆದರೆ, “ದೇವರ ನಾಡಲ್ಲಿ’ ಚಿತ್ರದಲ್ಲಿ ಮಾತ್ರ ನನ್ನ ಲೈಫ್ನಲ್ಲೇ ಮರೆಯಲಾರದ ಅನುಭವಗಳಿವೆ. ಅಪ್ಪ, ಅಮ್ಮ ಇಬ್ಬರೂ ನನ್ನೊಂದಿಗೆ ಇದ್ದರು. ಸುರೇಶ ಸರ್ ಜತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿತು. ಆದರೆ, ಬೇರೆಯವರ ಜತೆ ಹೇಗೋ, ಏನೋ ಎಂಬ ಭಯವಿತ್ತು. ಐದಾರು ದಿನಗಳ ಕಾಲ ಎಲ್ಲರೂ ಪರಿಚಯವಾದರು. ಎಲ್ಲರ ಸಹಕಾರ, ಪ್ರೋತ್ಸಾಹ ಇತ್ತು. ಎಲ್ಲವನ್ನೂ ನಿಧಾನವಾಗಿ ಅರ್ಥಮಾಡಿಕೊಂಡೆ. ಒಳ್ಳೆಯ ಫ್ಯಾಮಿಲಿ ವಾತಾವರಣ ನಿರ್ಮಾಣವಾಯ್ತು’ ಎನ್ನಲು ಮರೆಯುವುದಿಲ್ಲ.
ರಂಗಭೂಮಿಯಲ್ಲಿ ಮಂಡ್ಯ ರಮೇಶ್ ದೊಡ್ಡ ಹೆಸರು. ಇವತ್ತು ಚಿತ್ರರಂಗದಲ್ಲಿರುವ ಅನೇಕರಿಗೆ ಅವರು ಗುರು ಎಂದರೆ ತಪ್ಪಲ್ಲ. ಹೀಗಿರುವಾಗ ಅವರ ಮಗಳಿಗೆ ಚಿತ್ರರಂಗದಲ್ಲಿ ಆಸಕ್ತಿ ಇರಲ್ವಾ? ಖಂಡಿತಾ ಇದೆ. ದಿಶಾ ಸುಮಾರು 13 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ರಂಗಭೂಮಿಯಿಂದ ಬಂದ ಕಲಾವಿದರಿಗೆ ಪಾತ್ರ ಬಗ್ಗೆ ಭಯವಿರುವುದಿಲ್ಲ. ಅವರಲ್ಲಿ ಪ್ರಶ್ನೆಗಳು, ಕುತೂಹಲ ಜಾಸ್ತಿ ಇರುತ್ತದೆ. ರಂಗಭೂಮಿ ಕಲಿಸೋದು ನಂಬಿಕೆ, ಸೂಕ್ಷ್ಮತೆಯನ್ನು. ಇವತ್ತು ನನ್ನಲ್ಲಿ ಆತ್ಮವಿಶ್ವಾಸ ಇದೆ ಎಂದರೆ ಅದಕ್ಕೆ ಕಾರಣ ರಂಗಭೂಮಿ. ದಿನಾ ಅಲ್ಲಿ ಏನೇನೋ ಹೊಸ ಪ್ರಯೋಗಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿರುತ್ತೇವೆ. ಹೊಸ ಪಾತ್ರದ ಹುಡುಕಾಟ ಕೂಡಾ ರಂಗಭೂಮಿಯಿಂದಲೇ ಆರಂಭವಾಗುತ್ತದೆ’ ಎಂದು ತಮ್ಮ ರಂಗಭೂಮಿ ತಳಹದಿ ಬಗ್ಗೆಯೂ ಹೇಳುತ್ತಾರೆ. ಅಪ್ಪನ ಜೊತೆ ಸೇರಿಕೊಂಡು ಸಾಕಷ್ಟು ಶೋಗಳನ್ನು ಕೊಟ್ಟಿರುವ ದಿಶಾ ಇತ್ತೀಚೆಗೆ ಅಮೆರಿಕಾದಲ್ಲೂ ನಾಟಕ ಪ್ರದರ್ಶನ ನೀಡಿದ್ದಾರೆ.
Related Articles
ಸಾಮಾನ್ಯವಾಗಿ ಗಾಂಧಿನಗರಕ್ಕೆ ಹೊಸದಾಗಿ ಬರುವ ನಾಯಕಿಯರನ್ನು ಕೇಳಿದರೆ ಸಿನಿಮಾನೇ ನನ್ನ ಕನಸು ಎಂದು ಹೇಳುತ್ತಾರೆ. ಆದರೆ ದಿಶಾಗೆ ಕೇವಲ ಸಿನಿಮಾವಷ್ಟೇ ಕನಸಲ್ಲ. ರಂಗಭೂಮಿಯ ಬಗ್ಗೆಯೂ ಸಾಕಷ್ಟು ಕನಸುಗಳಿವೆ. “ನನಗೆ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಹಾಗಂತ ಅದಕ್ಕಾಗಿ ನನ್ನ ಆಸೆಗಳನ್ನು ಬದಿಗೊತ್ತಿ, ಸಿಕ್ಕ ಪಾತ್ರಗಳನ್ನು ಮಾಡಲು ನಾನು ಸಿದ್ಧಳಿಲ್ಲ. ನನಗೆ ಸವಾಲೆನಿಸುವಂತಹ ಪಾತ್ರ ಸಿಕ್ಕರೆ ಮಾತ್ರ ಮಾಡುತ್ತೇನೆ. ಆ ಪಾತ್ರದ ಬಗ್ಗೆ ನನಗೆ ಎಕ್ಸೆ„ಟ್‌ಮೆಂಟ್ ಬೇಕು. ಆ ಪಾತ್ರಕ್ಕಾಗಿ ನಾನು ರೀಸರ್ಚ್, ಹೋಂವರ್ಕ್ ಮಾಡುವಂತಿರಬೇಕು. ನಾನು ರಂಗಭೂಮಿಯಿಂದ ಬಂದ ಕಾರಣ ನನಗೆ ಪಾತ್ರಗಳ ಬಗ್ಗೆ ಕುತೂಹಲವಿರಬೇಕೆಂಬ ಆಸೆ ಇದೆ. ಮುಖ್ಯವಾಗಿ ಸೂಕ್ಷ್ಮತೆ ಕೂಡಾ ಬೇಕು. ಹಾಗಾಗಿ ನಾನು ಏಕಾಏಕಿ ಬಂದ ಸಿನಿಮಾಗಳನ್ನೆಲ್ಲಾ ಒಪ್ಪಿಕೊಳ್ಳೋದಿಲ್ಲ’ ಎನ್ನುವ ದಿಶಾಗೆ ರಂಗಭೂಮಿ ಬಗ್ಗೆ ಸಾಕಷ್ಟು ಕನಸುಗಳಿವೆ. “ಸಾಕಷ್ಟು ಶೋಗಳನ್ನು ನೀಡುತ್ತಿದ್ದೇನೆ. ಮುಂದೆ ರಂಗಭೂಮಿಯಲ್ಲೇ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ತೊಡಗಿಕೊಳ್ಳಬೇಕೆಂದಿದ್ದೇನೆ’ ಎನ್ನುವ ದಿಶಾಗೆ ನಾಟಕ ನಿರ್ದೇಶನ ಮಾಡುವ ಆಲೋಚನೆಯೂ ಇದೆ.
Advertisement
ಸದ್ಯ ಮೈಸೂರಿನಲ್ಲಿ ಬಿ.ಎ.ಜರ್ನಲಿಸಂ ಓದುತ್ತಿರುವ ದಿಶಾ ಒಳ್ಳೆಯ ಹಾಡುಗಾರ್ತಿ ಕೂಡಾ. ಮನೆಯೇ ರಂಗಭೂಮಿಯಾದ್ದರಿಂದ ನಾಟಕದ ಆಸಕ್ತಿ ಓಕೆ. ಆದರೆ ಹಾಡು ಹೇಗೆ ಎಂದು ಕೇಳಬಹುದು. ಅದಕ್ಕೆ ಕಾರಣ ರಾಜು ಅನಂತಸ್ವಾಮಿಯಂತೆ. “ರಾಜು ಅನಂತಸ್ವಾಮಿಯವರು ನಮ್ಮ ಮನೆ ಮೇಲ್ಗಡೆ ಸಂಗೀತ ಕಲಿಸುತ್ತಿದ್ದರು. ಆಗ ನಾನು ಕುಂಟಬಿಲ್ಲೆ ಆಡುತ್ತಿದ್ದೆ. ಆದರೆ ಅವರು ಹೇಳಿಕೊಡುವ ಸಂಗೀತ ಪಾಠವನ್ನು ಕೇಳಿಸಿಕೊಂಡು ನಾನು ಹಾಡುತ್ತಿದ್ದೆ. ಹಾಗೆ ಆಸಕ್ತಿ ಬೆಳೆಯಿತು. ನನ್ನ ಸಂಗೀತ ಆಸಕ್ತಿ ನೋಡಿ ಅವರೂ ಖುಷಿಯಾಗಿದ್ದರು. ಆದರೆ, ಈಗ ನನ್ನ ಬೆಳವಣಿಗೆ ನೋಡಲು ಅವರೇ ಇಲ್ಲ’ ಎನ್ನುತ್ತಾ ರಾಜು ಅನಂತಸ್ವಾಮಿಯನ್ನು ನೆನೆಸಿಕೊಳ್ಳುತ್ತಾರೆ ದಿಶಾ.
ಸದ್ಯ ದಿಶಾಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಯಾವುದನ್ನೂ ಒಪ್ಪಿಕೊಂಡಿಲ್ಲ. ವಿದ್ಯಾಭ್ಯಾಸ ಮುಂದುವರೆಸಿ ಆ ನಂತರ ಸಿನಿಮಾ ಕಡೆ ವಾಲುವ ಆಲೋಚನೆ ದಿಶಾಗಿದೆ.