Advertisement

ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್

03:07 PM Feb 19, 2021 | Team Udayavani |

ತುಳು ಚಿತ್ರರಂಗ ಇಂದಿಗೆ 50 ವರ್ಷಗಳನ್ನು ಪೂರೈಸಿದೆ. 1971ರ ಫೆ 19ರಂದು ಬಿಡುಗಡೆಯಾದ ಮೊದಲ ಚಿತ್ರ ‘ಎನ್ನ ತಂಗಡಿ’ ಯಿಂದ ಇಂದಿನವರೆಗೆ ನೂರಾರು ಚಿತ್ರಗಳು ಬಿಡುಗಡೆಯಾಗಿದೆ. ಈ ಸಮಯದಲ್ಲಿ ಚಿತ್ರರಂಗ ಹಲವಾರು ಏಳುಬೀಳುಗಳನ್ನು ಕಂಡಿದೆ. ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಗತಿ ಸಾಧಿಸಿದೆ.

Advertisement

ಕೋಸ್ಟಲ್ ವುಡ್ ನ ಈ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೊಂದಿಗೆ ಉದಯವಾಣಿ ಡಾಮ್ ಕಾಮ್ ನಡೆಸಿದ ಮಾತುಕತೆ ಸಾರಾಂಶ ಇಲ್ಲಿದೆ…

ಚಿತ್ರರಂಗ ಈಗ ಹೇಗಿದೆ ಸರ್?

ತುಳು ಚಿತ್ರರಂಗದ ಪರಿಸ್ಥಿತಿ ಮೊದಲು ತುಂಬಾ ಒಳ್ಳೆಯದಿತ್ತು, ಆದರೆ ಹಾಳಾಗಿದೆ. ಇಲ್ಲಿ ಥಿಯೇಟರ್ ನದ್ದೇ ದೊಡ್ಡ ಸಮಸ್ಯೆ. ಇಲ್ಲಿನ ಥಿಯೇಟರ್ ಮಾಲಕರು ಬೇರೆ ಭಾಷೆಗೆ ಅವಕಾಶ ಕೊಡುತ್ತಾರೆ. ತುಳು ಭಾಷೆಗೆ ಸಿಂಗಲ್ ಸ್ಕ್ರೀನ್ ಸರಿಯಾಗಿ ಸಿಗುವುದಿಲ್ಲ. ಇದು ಸಮಸ್ಯೆ.

ಒರಿಯಾರ್ದ್ ಒರಿ ಅಸಲ್ ಚಿತ್ರ ದೊಡ್ಡ ಹಿಟ್ ಆದ ನಂತರ ಎಲ್ಲರಿಗೂ ಸಿನಿಮಾ ಹುರುಪು ಬಂತು. ಹೀಗಾಗಿ ಒಂದು ಕಾಲದಲ್ಲಿ ಬೆನ್ನುಬೆನ್ನಿಗೆ ಚಿತ್ರಗಳು ಬಂದವು. ಆದರೆ ಕೆಲವು ಮಾತ್ರ ಹಿಟ್ ಆಯ್ತು, ಒಂದಷ್ಟು ಕಳಪೆ ಗುಣಮಟ್ಟದ ಚಿತ್ರಗಳೂ ಬಂದವು. ಇದು ಪ್ರೇಕ್ಷಕರಿಗೂ ನಿರಾಸೆ ಉಂಟುಮಾಡಿದ್ದು ಮಾತ್ರ ಸುಳ್ಳಲ್ಲ.

Advertisement

ನಿರ್ಮಾಪಕರ ಪರಿಸ್ಥಿತಿ ಹೇಗಿದೆ? ಅವರೆಷ್ಟು ಸೇಫ್?

ಥಿಯೇಟರ್ ಸಮಸ್ಯೆಯಿಂದ ನಿರ್ಮಾಪಕರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಥಿಯೇಟರ್ ಮಾಲಕರು ದೊಡ್ಡ ಹಂಚಿಕೆದಾರರಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಇದರಿಂದ ತುಳು ಸಿನಿಮಾಗಳು ಬಹುಬೇಗನೆ ಹೊರಬೀಳಬೇಕಾದ ಪರಿಸ್ಥಿತಿಯಿದೆ. ಹಿಂದೆ ಜ್ಯೋತಿ ಟಾಕೀಸ್ ಉತ್ತಮ ಸ್ಥಳದಲ್ಲಿತ್ತು, ಇದೀಗ ಅದೂ ಮುಚ್ಚಿದ್ದು, ನಮಗೆ ಸರಿಯಾದ ಸಿಂಗಲ್ ಸ್ಕ್ರೀನ್ ಥಿಯೇಟರ್ ಸಿಗದ ಪರಿಸ್ಥಿತಿಯಿದೆ.

ಇಷ್ಟು ವರ್ಷಗಳಲ್ಲಿ ಕಾನ್ಸೆಪ್ಟ್ ಗಳಲ್ಲಿ ಏನು ಬದಲಾವಣೆಯಾಗಿದೆ?

ಮೊದಲು ಕಥಾ ಹಂದರವೇ ಪ್ರಮುಖವಾದ ಚಿತ್ರಗಳಿದ್ದವು. ಆದರೆ ಈಗ ಹಾಸ್ಯ ಪ್ರಧಾನವಾಗಿದೆ. ನಮ್ಮ ಪ್ರಮುಖ ಪ್ರೇಕ್ಷಕರು ರಂಗಭೂಮಿ ಪ್ರದರ್ಶನಗಳನ್ನು ನೋಡಿಕೊಂಡು ಬಂದ ಪ್ರೇಕ್ಷಕರು. ಅವರು ಹಾಸ್ಯವನ್ನೇ ಬಯಸುತ್ತಾರೆ. ಹಾಸ್ಯವನ್ನು ಬಿಟ್ಟು ಬೇರೆ ಜಾನರ್ ನಲ್ಲಿ ಬಂದ ಸಿನಿಮಾಗಳು ಯಶಸ್ವಿಯಾಗಿಲ್ಲ.  ಆದರೆ ಮುಂದಿನ ದಿನಗಳಲ್ಲಿ ನಾವು ಬದಲಾಗಬೇಕಿದೆ. ಒಮ್ಮೆಲೆ ಇದು ಸಾಧ್ಯವಾಗದು. ನಿಧಾನವಾಗಿ ನಡೆಯುವ ಪ್ರಕ್ರಿಯೆಯಿದು. ಇದೀಗ ಅರ್ಜುನ್ ಕಾಪಿಕಾಡ್ ನಿರ್ದೇಶನದ ‘ಅಬತರ’ ಸಿನಿಮಾದಲ್ಲಿ ಈ ರೀತಿ ಪ್ರಯತ್ನ ಮಾಡುತ್ತಿದ್ದೇವೆ.

ರಂಗಭೂಮಿ ಮತ್ತು ಸಿನಿಮಾ

ನಮ್ಮ ರಂಗಭೂಮಿ ಈಗಲೂ ಸಿನಿಮಾಕ್ಕಿಂತ ಸ್ಟ್ರಾಂಗ್ ಇದೆ. ಹಿಂದೆ ನಾವು ಒಂದು ವರ್ಷದಲ್ಲಿ 375 ಶೋ ಮಾಡಿದ್ದೇವೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ತಾಂತ್ರಿಕವಾಗಿ ಹಿಟ್ ಸಿನಿಮಾ ನೀಡಿದ ನಂತರ ನಾವು ತೆಲಿಕೆದ ಬೊಳ್ಳಿ ಚಿತ್ರ ಮಾಡಿದೆವು. ಮುಂದೆ ರಂಗಭೂಮಿಯಲ್ಲಿದ್ದ ಬಹುತೇಕರು ಈಗ ಚಿತ್ರರಂಗದಲ್ಲಿದ್ದೇವೆ.

ಮುಂದಿನ ದಿನಗಳಲ್ಲಿ ಚಿತ್ರರಂಗ ಹೇಗಿರಬೇಕು?

ಚಿತ್ರರಂಗ ಬೆಳವಣಿಗೆ ಆಗಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು. ತುಳು ಸಿನಿಮಾಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಆಗಬೇಕು. ಮಲ್ಟಿಪ್ಲೆಕ್ಸ್ ನಿಂದ ಲಾಭವಿಲ್ಲ. ನಿರ್ಮಾಪಕರು ಉಳಿಯಬೇಕು. ಹೊಸಬರು ತಾಂತ್ರಿಕವಾಗಿ ಕಲಿತು ಬರಬೇಕು. ಬೇರೆ ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಬೇಕು. ನಂತರ ಅನುಭವದೊಂದಿಗೆ ಸಿನಿಮಾ ಮಾಡಬೇಕು. ಆಗ ಬೆಳವಣಿಗೆ ಸಾಧ್ಯ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next