ಚಿತ್ರರಂಗದಲ್ಲಿ ನೆಲೆಯೂರುವುದು ಸುಲಭದ ಮಾತಲ್ಲ. ಬಣ್ಣದ ಬದುಕಿನ ಹಾದಿ ಸುಖದ ಸುಪ್ಪತ್ತಿಗೆಯಲ್ಲ ಎಂಬುದಕ್ಕೆ ಹಲವಾರು ನಟ, ನಟಿಯರ ಬದುಕಿನ ನಿರ್ದಶನಗಳು ನಮ್ಮ ಕಣ್ಣ ಮುಂದಿದೆ. ಕನ್ನಡ ಚಿತ್ರರಂಗ ಕೂಡಾ ಅದಕ್ಕೆ ಹೊರತಾಗಿಲ್ಲ. ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್, ಬಾಸ್ ಆಫ್ ಸ್ಯಾಂಡಲ್ ವುಡ್, ಚಾಲೆಂಜಿಂಗ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡ ಕನ್ನಡ ಚಿತ್ರರಂಗದ ದರ್ಶನ್ ಬದುಕಿನ ಪಯಣ ಹೇಗಿತ್ತು ಗೊತ್ತಾ…
ದರ್ಶನ್ ತೂಗುದೀಪ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಕನ್ನಡ ಚಿತ್ರರಂಗದ ಅದ್ಭುತ ನಟ, ನಿರ್ಮಾಪಕ, ವಿತರಕರಾಗಿ ಚಿರಪರಿಚಿತರಾಗಿದ್ದವರು. ಆದರೆ ತನ್ನ ಮಗ ದರ್ಶನ್ ಚಿತ್ರರಂಗ ಪ್ರವೇಶಿಸುವುದು ಬೇಡ ಎಂಬುದು ತೂಗುದೀಪ್ ಅಭಿಲಾಷೆಯಾಗಿತ್ತಂತೆ. ಶ್ರೇಷ್ಠ ನಟ, ಕ್ರೀಡಾಪಟು, ಈಜಿಪಟು ಹೀಗೆ ಯಾರೇ ಆಗಿರಲಿ ಅವರ ಮಕ್ಕಳು ಕೂಡಾ ತಂದೆ, ತಾಯಿಯಂತೆಯೇ ಖ್ಯಾತರಾಗುತ್ತಾರೆಂಬುದು ಹೇಳಲು ಸಾಧ್ಯವಿಲ್ಲ.
ಕನ್ನಡ ಚಿತ್ರರಂಗದ ನರಸಿಂಹರಾಜು, ಉಮೇಶ್, ದಿನೇಶ್, ಸುಂದರ್ ಕೃಷ್ಣ ಅರಸ್, ವಜ್ರಮುನಿ, ದ್ವಾರಕೀಶ್, ಅನಂತ್ ನಾಗ್, ಶಂಕರ್ ನಾಗ್, ಸಾಹುಕಾರ್ ಜಾನಕಿ, ಹರಿಣಿ, ಪಂಡರಿಬಾಯಿ ಹೀಗೆ ಖ್ಯಾತ ನಟರಾಗಿದ್ದವರ ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದರು ಕೂಡಾ ಯಶಸ್ವಿ ಕಾಣಲು ಸಾಧ್ಯವಾಗಿಲ್ಲ, ಕೆಲವರು ಚಿತ್ರರಂಗದಿಂದ ದೂರವೇ ಉಳಿದು ಬಿಟ್ಟಿದ್ದರು!
ತೂಗುದೀಪ್ ಕುಟುಂಬ ಮೈಸೂರಿನ ಪ್ರಕಾಶ್ ಹೋಟೆಲ್ ಸಮೀಪ ನೆಲೆಸಿತ್ತು ಅಂತ ಒಂದು ಬಾರಿ ದರ್ಶನ್ ಸಂದರ್ಶನವೊಂದರಲ್ಲಿ ಹೇಳಿದ್ದ ನೆನಪು. ಪ್ರಾಥಮಿಕ ಹಾಗೂ ಪಿಯುಸಿವರೆಗೆ ಸಾಂಸ್ಕೃತಿಕ ನಗರಿ ಎಂದೇ ಹೆಸರಾದ ಮೈಸೂರಿನಲ್ಲಿ ದರ್ಶನ ವಿದ್ಯಾಭ್ಯಾಸ ಪಡೆದಿದ್ದರು.
Related Articles
ಹಾಲು ಮಾರಾಟ, ಲೈಟ್ ಬಾಯ್ ಆಗಿ ಕೆಲಸ ಮಾಡಿದ್ರು!
ತಂದೆ ತೂಗುದೀಪ್ ಅವರು ಆ ಕಾಲದಲ್ಲಿ ಖ್ಯಾತ ನಟರಾಗಿದ್ದರೂ ಸಹ ದರ್ಶನ್ ವೃತ್ತಿ ಬದುಕು ನಟನಾಗಿಯೇ ಆರಂಭವಾಗಿರಲಿಲ್ಲವಾಗಿತ್ತು. ಈ ಸಂದರ್ಭದಲ್ಲಿ ತಾಯಿ ಮೀನಾ ತೂಗುದೀಪ್ ಗೆ ಆರ್ಥಿಕವಾಗಿ ಸಹಾಯವಾಗಲು ದರ್ಶನ್ ಹಾಲು ಮಾರಾಟದ ವ್ಯವಹಾರ ಮಾಡಿದ್ದರು. ಏತನ್ಮಧ್ಯೆ ದರ್ಶನ್ ಕುಟುಂಬದ ಪಾಲಿಗೆ ಬರಸಿಡಿಲಿನಂತೆ ಬಂದೆರಗಿದ್ದು…ತಂದೆ ತೂಗುದೀಪ್ ಅವರ ನಿಧನ. ಈ ಸಂದರ್ಭದಲ್ಲಿ ತಾನು ಸಿನಿಮಾ ಜಗತ್ತಿನಲ್ಲಿ ದೊಡ್ಡ ಸಾಧನೆಯನ್ನು ಮಾಡಬೇಕು ಎಂದು ದರ್ಶನ್ ತಾಯಿಗೆ ತನ್ನ ಕನಸನ್ನು ಬಿಚ್ಚಿಟ್ಟಿದ್ದರಂತೆ.
ಬಳಿಕ ಹೆಗ್ಗೋಡಿನ ಕೆವಿ ಸುಬ್ಬಣ್ಣ ಕಟ್ಟಿಬೆಳೆಸಿದ್ದ ನೀನಾಸಂನಲ್ಲಿ ತರಬೇತಿ ಪಡೆದಿದ್ದರು. ನಂತರ ಕನ್ನಡ ಚಿತ್ರರಂಗದಲ್ಲಿ ಕಾಲಿಟ್ಟಿದ್ದ ದರ್ಶನ್ ಗೆ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ. ಆಗ ಲೈಟ್ ಬಾಯ್ ಆಗಿ, ಬಿಸಿ ಗೌರಿಶಂಕರ್ ಅವರ ಬಳಿ ಕ್ಯಾಮರಾಮನ್ ಆಗಿದ್ದರು, ಸ್ಟಂಟ್ ಮ್ಯಾನ್ ಆಗಿಯೂ ದರ್ಶನ್ ಹೊಟ್ಟೆಪಾಡಿಗಾಗಿ ದುಡಿದಿದ್ದರು. ಮೊತ್ತ ಮೊದಲ ನಟನೆ ಅಂದರೆ ಅದು ಎಸ್.ನಾರಾಯಣ ಅವರ ಧಾರಾವಾಹಿಯಲ್ಲಿ ದರ್ಶನ್ ನಟಿಸಿದ್ದು.
ಅಷ್ಟು ಭಾರವನ್ನು ಆ ಹುಡುಗನ ಮೇಲೆ ಹೊರಿಸಬೇಡಿ ಎಂದಿದ್ದರು ಪಾರ್ವತಮ್ಮ!
ಒಮ್ಮೆ ಸಿನಿಮಾ ಚಿತ್ರೀಕರಣದ ವೇಳೆ ಭಾರದ ಲೈಟ್ಸ್ ಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಯುವಕನನ್ನು(ದರ್ಶನ್) ನೋಡಿ ಪಾರ್ವತಮ್ಮ ರಾಜ್ ಕುಮಾರ್ ಅವರು..ನಿರ್ದೇಶಕರನ್ನು ಕರೆದು,ನೋಡಿ ಇನ್ಮುಂದೆ ನೀವು ಅಷ್ಟು ಭಾರದ ಲೈಟ್ಸ್ ಹೊರುವ ಕೆಲಸವನ್ನು ದರ್ಶನ್ ನಿಂದ ಮಾಡಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರಂತೆ. ಅದಕ್ಕೆ ಕಾರಣ ತೂಗುದೀಪ್ ಶ್ರೀನಿವಾಸ್ ಮಗ ಎಂಬ ಸತ್ಯ ತಿಳಿದು ಅವರು ಈ ರೀತಿ ಹೇಳಿದ್ದರಂತೆ.
1997ರಲ್ಲಿ ಮೊದಲ ಸಿನಿಮಾ:
ಧಾರಾವಾಹಿಯಲ್ಲಿ ನಟಿಸಿದ ಬಳಿಕ ದರ್ಶನ್ ಗೆ ಎಸ್.ನಾರಾಯಣ್ 1997ರಲ್ಲಿ ಮೊದಲ ಬಾರಿಗೆ ಮಹಾಭಾರತ ಎಂಬ ಸಿನಿಮಾದಲ್ಲಿ ನಟಿಸಲು ಆಫರ್ ಕೊಟ್ಟಿದ್ದರು. ನಂತರ 2000ನೇ ಇಸವಿಯಲ್ಲಿ ಡಿ. ರಾಜೇಂದ್ರ ಬಾಬು ಅವರ ನಿರ್ದೇಶನದ ದೇವರ ಮಗ ಸಿನಿಮಾದಲ್ಲಿ ದರ್ಶನ್ ಅಂಬಿಯ ಮಗನ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಎಲ್ಲರ ಮನೆ ದೋಸೆನೂ, ಬೂತಯ್ಯನ ಮಕ್ಕಳು, 2001ರಲ್ಲಿ ಹರಿಶ್ಚಂದ್ರ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಸಿನಿಮಾಗಳಲ್ಲಿ ದರ್ಶನ್ ಗೆ ಸಿಕ್ಕಿದ್ದು ಪುಟ್ಟ, ಪುಟ್ಟ ಪಾತ್ರಗಳು! ಆಗ ಸಿನಿಮಾಕ್ಕಿಂತ ಹೆಚ್ಚಾಗಿ ಧಾರಾವಾಹಿಯಲ್ಲಿಯೇ ದರ್ಶನ್ ಮುಖ್ಯ ಪಾತ್ರಗಳಲ್ಲಿ ಮಿಂಚಿದ್ದರು.
ವಿಜಯಲಕ್ಷ್ಮಿ ಜೊತೆ ಪ್ರೇಮ ವಿವಾಹ:
ತನ್ನ ಹತ್ತಿರದ ಸಂಬಂಧಿ ವಿಜಯಲಕ್ಷ್ಮೀಯನ್ನು ದರ್ಶನ್ ಪ್ರೇಮಿಸಿ 2003ರಲ್ಲಿ ಧರ್ಮಸ್ಥಳದಲ್ಲಿ ಸಪ್ತಪದಿ ತುಳಿದಿದ್ದರು. ದಂಪತಿಗೆ ವಿನೀಶ್ ಎಂಬ ಪುತ್ರನಿದ್ದಾನೆ. 2011ರಲ್ಲಿ ದರ್ಶನ್, ವಿಜಯಲಕ್ಷ್ಮಿ ಸಂಸಾರದಲ್ಲಿ ಬಿರುಕು, ಗಲಾಟೆ ನಡೆದುಬಿಟ್ಟಿತ್ತು. 14 ದಿನಗಳ ನ್ಯಾಯಾಂಗ ಬಂಧನ ಅನುಭವಿಸಿದ್ದ ದರ್ಶನ್. ಕೊನೆಗೆ ಚಿತ್ರರಂಗದ ಹಿರಿಯರಾದ ದಿ.ಅಂಬರೀಶ್, ಜಗ್ಗೇಶ್, ದೊಡ್ಡಣ್ಣ ಸೇರಿಕೊಂಡು ಇಬ್ಬರ ನಡುವಿನ ಗೊಂದಲ ಪರಿಹರಿಸಿ ವಿವಾದವನ್ನು ಕೋರ್ಟ್ ಹೊರಗೆ ಇತ್ಯರ್ಥಗೊಳಿಸಿದ್ದರು. ತದನಂತರ ದರ್ಶನ್, ವಿಜಯಲಕ್ಷ್ಮಿ ಮತ್ತೆ ಒಂದಾಗಿದ್ದರು.
ಪ್ರಾಣಿಪ್ರಿಯ, ಛಾಯಾಗ್ರಹಕ, ಕಾರು, ಬೈಕ್ ಗಳ ಕ್ರೇಜ್!
ನಟ ದರ್ಶನ್ ಗೆ ಐಶಾರಾಮಿ ಕಾರು, ಬೈಕ್ ಗಳ ಮೇಲೆ ಅತೀಯಾದ ಪ್ರೀತಿ. ಅಷ್ಟೇ ಅಲ್ಲ ಮೈಸೂರು ಹೊರವಲಯ ತಿರುಮಕೂಡಲು ನರಸಿಪುರದಲ್ಲಿ ತನ್ನದೇ ಸ್ವಂತ ಮಿನಿ ಪ್ರಾಣಿ ಸಂಗ್ರಹಾಲಯವನ್ನು ಮಾಡಿಕೊಂಡಿದ್ದಾರೆ. ಅಲ್ಲಿ ಹಸು, ಕುದುರೆ, ಏಮೂ ಸೇರಿದಂತೆ ವಿವಿಧ ಪ್ರಾಣಿ, ಪಕ್ಷಿಗಳಿವೆ. ಕರ್ನಾಟಕ ಅಭಯಾರಣ್ಯ ರಾಯಭಾರಿಯಾಗಿರುವ ದರ್ಶನ್ ಅವರು ಉತ್ತಮ ಛಾಯಾಗ್ರಾಹಕರೂ ಹೌದು…
ದರ್ಶನ್ ವೃತ್ತಿ ಬದುಕಿಗೆ ತಿರುವು ಕೊಟ್ಟ ಚಿತ್ರ ಮೆಜೆಸ್ಟಿಕ್!
ಎಲ್ಲಾ ಏಳು ಬೀಳುಗಳ ನಡುವೆ 2002ರಲ್ಲಿ ಪಿಎನ್ ಸತ್ಯ ಅವರ ನಿರ್ದೇಶನದ ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಹೀರೋ ಆಗಿ ಪ್ರೇಕ್ಷಕರ ಮುಂದೆ ಬಂದಿದ್ದರು. ಅಮಾಯಕ ದಾಸ ಎಂಬ ಹುಡುಗ ಭೂಗತ ಲೋಕಕ್ಕೆ ಎಂಟ್ರಿ ಕೊಡುವ ಕಥಾ ಹಂದರ ಅದಾಗಿತ್ತು. ನಂತರ ಕಿಟ್ಟಿ, ನಿನಗೋಸ್ಕರ, ನೀನಂದರೆ ಇಷ್ಟ, ದಾಸ ಸಿನಿಮಾಗಳಲ್ಲಿ ನಟಿಸಿದ್ದರು. 2003ರಲ್ಲಿ ಕರಿಯಾ ಸಿನಿಮಾ ಸೂಪರ್ ಹಿಟ್ ಆಗಿತ್ತು. ತದನಂತರ ನಮ್ಮ ಪ್ರೀತಿಯ ರಾಮು, ಬಾಸ್, ಪ್ರಿನ್ಸ್, ಸಾರಥಿ, ಸಂಗೊಳ್ಳಿ ರಾಯಣ್ಣ, ಚಿಂಗಾರಿ, ಬುಲ್, ಬುಲ್, ಬೃಂದಾವನ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ವೈವಿಧ್ಯತೆಯ ಪಾತ್ರಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವುದು ನಮ್ಮ ಕಣ್ಣ ಮುಂದಿರುವ ಸತ್ಯ.
ಓಂಪ್ರಕಾಶ್ ರಾವ್ ನಿರ್ದೇಶನದ ಕಲಾಸಿಪಾಳ್ಯ, ಶಾಸ್ತ್ರಿ, ಅಯ್ಯ, ಸ್ವಾಮಿ, ದತ್ತಾ, ಭೂಪತಿ ಹೀಗೆ ಒಂದರ ಹಿಂದೆ ಒಂದು ಹಿಟ್ ಸಿನಿಮಾಗಳನ್ನು ನೀಡಿದ್ದ ಹೆಗ್ಗಳಿಕೆ ದರ್ಶನ್ ಅವರದ್ದು. ಗಜ, ಇಂದ್ರ, ಪೋರ್ಕಿ, ಅಭಯ್, ಯೋಧ ಸಿನಿಮಾಗಳಿಂದಾಗಿ ದರ್ಶನ್ ಬಾಕ್ಸಾಫೀಸ್ ಸುಲ್ತಾನ್ ಎಂಬ ಬಿರುದು ಗಳಿಸಿದ್ದರು.
ಬಹುತೇಕರಿಗೆ ಗೊತ್ತಿಲ್ಲದ ನಿಜ ಸಂಗತಿ ಏನೆಂದರೆ ದರ್ಶನ್ ಅವರು 2000ನೇ ಇಸವಿಯಲ್ಲಿ ತೆರೆಕಂಡಿದ್ದ ತಮಿಳಿನ ವಲ್ಲಾರಸು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯ್ ಕಾಂತ್ ಹೀರೋ ಆಗಿದ್ದರು. ದರ್ಶನ್ ಗೆ ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರವಿತ್ತು. ಸ್ನೇಹಿತರ ಗುಂಪು ಪೊಲೀಸ್ ಪಡೆಗೆ ಸೇರುವ ದೃಶ್ಯದಲ್ಲಿ ದರ್ಶನ್ ನಟಿಸಿದ್ದರು!
ಕಷ್ಟದ ಕುಲುಮೆಯಲ್ಲಿ ಬೆಂದ ದರ್ಶನ್ ತನ್ನ ಎರಡು ದಶಕಗಳ ವೃತ್ತಿ ಜೀವನದಲ್ಲಿ ನಟನೆಗಾಗಿ ಕರ್ನಾಟಕ ಸ್ಟೇಟ್ ಅವಾರ್ಡ್, ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಮಾರ್ಚ್ 1ಕ್ಕೆ ಬಹುನಿರೀಕ್ಷೆಯ ಯಜಮಾನ ಸಿನಿಮಾ ಕೂಡಾ ತೆರೆಗೆ ಬರುತ್ತಿದೆ…. ಬೆಸ್ಟ್ ಆಫ್ ಲಕ್….