ಬೆಂಗಳೂರು: ಕಳೆದ ಎರಡು ವರ್ಷಗಳಿಂದ ನಟ ದರ್ಶನ್ ಹಾಗೂ ಕನ್ನಡ ಮಾಧ್ಯಮಗಳ ನಡುವೆ ಉಂಟಾಗಿದ್ದ ಮೈಮನಸ್ಸು ಬಗೆಹರಿದಿದೆ.
ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಬೆಂಗಳೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಿನ್ನಾಭಿ ಪ್ರಾಯಕ್ಕೆ ತೆರೆ ಎಳೆಯಲಾಯಿತು.
“ನನ್ನ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ’ ಎಂದು ದರ್ಶನ್ ಹೇಳುವ ಮೂಲಕ ವಿವಾದ ಇತ್ಯರ್ಥವಾಗಿದೆ.
ಸಾರ್ವಜನಿಕ ಜೀವನದಲ್ಲಿರುವ ಗಣ್ಯ ಹಾಗೂ ಜನಪ್ರಿಯ ವ್ಯಕ್ತಿಗಳು ನಡೆ ನುಡಿಯಲ್ಲಿ ಸಮಾಜಕ್ಕೆ ಮಾದರಿಯಾಗಿರಬೇಕು. ಮಾಧ್ಯಮ ಯಾರನ್ನೂ ದ್ವೇಷಿಸುವುದಿಲ್ಲ. ಪರಸ್ಪರ ಗೌರವ ದಿಂದ ನಡೆದುಕೊಳ್ಳಬೇಕು ಎಂಬ ಅಭಿಪ್ರಾಯ ಸಂಪಾದಕರ ಸಭೆಯಲ್ಲಿ ವ್ಯಕ್ತವಾಯಿತು.
ಈ ವೇಳೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ “ಸದ್ಯ ಕನ್ನಡ ಚಿತ್ರರಂಗ ಕಷ್ಟದಲ್ಲಿದೆ. ಹೊಸ ಕನಸಿನೊಂದಿಗೆ ಬರುತ್ತಿರುವ ನಿರ್ಮಾಪಕರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ. ಪರಭಾಷಾ ಸಿನಿಮಾಗಳ ಎದುರು ನಮ್ಮ ಸಿನಿಮಾಗಳು ಗೆಲ್ಲಬೇಕಾದರೆ ಮಾಧ್ಯಮಗಳ ನೆರವು ಅಗತ್ಯವಾಗಿದೆ. ಕಳೆದ ಹಲವು ವರ್ಷಗಳಿಂದ ಮಾಧ್ಯಮ ಹಾಗೂ ಚಿತ್ರರಂಗ ಒಂದೇ ಕುಟುಂಬದಂತಿದೆ. ಇನ್ನು ಮುಂದೆಯೂ ಅದೇ ಮನೋಭಾವದೊಂದಿಗೆ ನಾವು ಮುಂದುವರೆಯೋಣ” ಎಂದು ಹೇಳಿದರು.