Advertisement

ಐ ಲವ್‌ ಯೂಗೆ ಬ್ರಹ್ಮಾನಂದಂ ಕಾಮಿಡಿ

04:16 PM Jul 17, 2018 | Sharanya Alva |

ತೆಲುಗಿನ ಬಿಝಿ ಹಾಗೂ ಬೇಡಿಕೆಯ ಕಾಮಿಡಿ ನಟ ಯಾರೆಂದರೆ ಬ್ರಹ್ಮಾನಂದಂ ಹೆಸರು ಒಕ್ಕೊರಲಿನಿಂದ ಕೇಳಿಬರುತ್ತದೆ. ಅಲ್ಲಿನ ಯಾವುದೇ ಸ್ಟಾರ್‌ ನಟರ ಚಿತ್ರವಾದರೂ ಅಲ್ಲಿ ಬ್ರಹ್ಮಾನಂದಂ ಇರಲೇಬೇಕು. ಬ್ರಹ್ಮಾನಂದಂ ವಿಚಾರ ಈಗ ಯಾಕೆ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ “ಐ ಲವ್‌ ಯೂ’. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯೂ’ ಚಿತ್ರದಲ್ಲಿ ಬ್ರಹ್ಮಾನಂದಂ ನಟಿಸುತ್ತಿದ್ದಾರೆ. 

Advertisement

ಈಗಾಗಲೇ ಮಾತುಕತೆಯಾಗಿ ಪಾತ್ರ ಒಪ್ಪಿಕೊಂಡಿರುವ ಬ್ರಹ್ಮಾನಂದಂ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಹಲವು ದಿನಗಳಿಂದ “ಐ ಲವ್‌ ಯೂ’ ಚಿತ್ರೀಕರಣ ನಗರದ ಶೆರಟನ್‌ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಬ್ರಹ್ಮಾನಂದಂ ಅವರ ದೃಶ್ಯಗಳ ಚಿತ್ರೀಕರಣ ಕೂಡಾ ಶೆರಟನ್‌ ಹೋಟೆಲ್‌ನಲ್ಲಿ ನಡೆಯಲಿದೆ. ಎಲ್ಲಾ ಓಕೆ, ಕನ್ನಡ ಸಿನಿಮಾಕ್ಕೆ ಬ್ರಹ್ಮಾನಂದಂ ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. “ಐ ಲವ್‌ ಯೂ’ ಚಿತ್ರ ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗಿನಲ್ಲೂ ತಯಾರಾಗುತ್ತಿದೆ. ಆ ಕಾರಣಕ್ಕಾಗಿ ಎರಡು ಕಡೆಗೆ ಪರಿಚಿತ ಮುಖದ ಕಲಾವಿದರಿದ್ದರೆ ಚೆಂದ ಎಂಬ ಕಾರಣದಿಂದ ಚಂದ್ರು ಬ್ರಹ್ಮಾನಂದಂ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

ನಾಲ್ಕೈದು ದಿನಗಳ ಕಾಲ ಬ್ರಹ್ಮಾನಂದಂ “ಐ ಲವ್‌ ಯೂ’ ಸೆಟ್‌ನಲ್ಲಿರಲ್ಲಿದ್ದಾರೆ.  ಉಪೇಂದ್ರ ನಾಯಕರಾಗಿರುವ “ಐ ಲವ್‌ ಯೂ’ ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ. ಈಗಾಗಲೇ ಚಂದ್ರು, ಉಪ್ಪಿ ಹಾಗೂ ರಚಿತಾ ಕಾಂಬಿನೇಶನ್‌ನಲ್ಲಿ ಹಾಡಿನ ಚಿತ್ರೀಕರಣ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದು, ಈ ಹಿಂದೆ ಮಾಡದಂತಹ ಪಾತ್ರ ಮಾಡಿದ್ದಾರೆನ್ನಲಾಗಿದೆ. ಅಂದಹಾಗೆ, ಚಂದ್ರು ಈ ಚಿತ್ರದಲ್ಲಿ ಪ್ರೀತಿಗೆ ಹೊಸ ವ್ಯಾಖ್ಯಾನ ಕೊಡಲು ಹೊರಟಿದ್ದಾರಂತೆ. ಚಿತ್ರಕ್ಕೆ ಕಿರಣ್‌ ಸಂಗೀತ, ಜ್ಞಾನಮೂರ್ತಿ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next