ಮುಂಬೈ: ಹತ್ತರಿಂದ 16 ವರ್ಷ ವಯಸ್ಸಿನ ಮಕ್ಕಳ ಆಕ್ಷೇಪಾರ್ಹ ಚಿತ್ರಗಳು ಮತ್ತು ವಿಡಿಯೋಗಳನ್ನು ಬಳಸಿ ದಂಧೆ ಮಾಡುತ್ತಿದ್ದ ನಟನೋರ್ವನ ವಿರುದ್ಧ ಸಿಬಿಐ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಮೂಲದ ನಟ ಕಿರುತೆರೆಯಲ್ಲಿ ನಟಿಸುತ್ತಿದ್ದ ಎಂದು ವರದಿಯಾಗಿದೆ.
ಈತ ಅಪ್ರಾಪ್ತ ವಯಸ್ಸಿನವರ ಅಶ್ಲೀಲ, ಆಕ್ಷೇಪಾರ್ಹ ವಿಡಿಯೋ ದಂಧೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುತ್ತಿದ್ದ. ಈತನ ವಿರುದ್ಧ ಸಿಬಿಐ ಅಧಿಕಾರಿಗಳು ಪೋಕ್ಸೋ ಮತ್ತು ಐಟಿ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಅಮೇರಿಕಾ, ಯೂರೋಪ್ ಮತ್ತು ದಕ್ಷಿಣ ಏಶ್ಯಾದ ಅಪ್ರಾಪ್ತ ವಯಸ್ಕರು ಈತನ ಕೃತ್ಯಕ್ಕೆ ಬಲಿಪಶುಗಳಾಗಿದ್ದಾರೆ. ಹತ್ತರಿಂದ 16 ವರ್ಷ ವಯಸ್ಸಿನ ಸುಮಾರು ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ಸಂಪರ್ಕಿಸಿದ್ದ.
ಚಲನಚಿತ್ರ ನಟನಂತೆ ಗುರುತಿಸಿಕೊಳ್ಳುತ್ತಾ, ಅಪ್ರಾಪ್ತ ವಯಸ್ಕರನ್ನು ಸಂಪರ್ಕಿಸುತ್ತಿದ್ದ ಈತ ಆಮಿಷವೊಡ್ಡಿ, ಮಕ್ಕಳನ್ನು ಮರುಳು ಮಾಡುತ್ತಿದ್ದ. ಅವರ ವ್ಯಾಟ್ಸಪ್ ಸಂಖ್ಯೆ ಪಡೆದು ಅವರಿಂದ ಅಶ್ಲೀಲ ಫೋಟೊಗಳು, ವಿಡಿಯೋಗಳನ್ನು ತರಿಸಿಕೊಳ್ಳುತ್ತಿದ್ದ.
ಇದನ್ನೂ ಓದಿ:ಶಸ್ತ್ರಾಸ್ತ್ರ ಹೋರಾಟ ಭ್ರಮನಿರಸನ: ದಾಂತೇವಾಡದ 32 ಮಂದಿ ನಕ್ಸಲೀಯರು ಪೊಲೀಸರಿಗೆ ಶರಣು
ನಂತರ ಆರೋಪಿಯು ಎನ್‌ಕ್ರಿಪ್ಟ್ ಮಾಡಿದ ಸೋಷಿಯಲ್ ಮೀಡಿಯಾ ಅಪ್ಲಿಕೇಶನ್‌ಗಳ ಮೂಲಕ ಈ ವಿಡಿಯೋಗಳನ್ನು ವಿದೇಶದಲ್ಲಿರುವ ತನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಸಿಬಿಐ ವಿಶೇಷ ಘಟಕ ಇತ್ತೀಚೆಗೆ ಮುಂಬೈನಲ್ಲಿ ದಾಳಿ ಮತ್ತು ಶೋಧ ನಡೆಸಿದ್ದು, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ವಶಪಡಿಸಿಕೊಂಡಿದೆ. ಭಾರತ ಮತ್ತು ವಿದೇಶಗಳಲ್ಲಿನ ಆರೋಪಿಯ ಗ್ರಾಹಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.