ಬೆಂಗಳೂರು: ಶಾಸಕ, ನಟ ಅಂಬರೀಶ್ ಅನಾರೋಗ್ಯದ ಕಾರಣ ನೀಡಿ ಮಂಡ್ಯ ಟಿಕೆಟ್ ನಿರಾಕರಿಸಿದ್ದಲ್ಲದೇ, ಚುನಾವಣಾ ರಾಜಕೀಯದಿಂದಲೂ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಅವರ ಬದಲಿಗೆ ಗಣಿಗ ರವಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅಂಬರೀಶ್‌ಗೆ ಟಿಕೆಟ್ ಘೋಷಿಸಿ ಬಿ ಫಾರಂ ನೀಡಿ, ನಾಮಪತ್ರ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಯಾರ ಮಾತಿಗೂ ತಲೆಬಾಗದ ಕಾರಣ ಅಂತಿಮವಾಗಿ ರವಿ ಗಣಿಗ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಜತೆಗೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಜವಾಬ್ದಾರಿಯನ್ನು ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರಿಗೆ ವಹಿಸಲಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಂಬರೀಶ್ ತಮ್ಮ ನಿಲುವು ಪ್ರಕಟಿಸಿದ್ದರಿಂದ ನಾಯಕರು ನಿಟ್ಟುಸಿರುಬಿಟ್ಟಿದ್ದಾರೆ. ಈ ಮಧ್ಯೆ, ಪರಮೇಶ್ವರ್ ಅಂಬರೀಶ್ ಜತೆ ಮಾತನಾಡಿದರೆ, ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದು ವಿಶೇಷ.
ತಮ್ಮ ನಿರ್ಧಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಂಬರೀಶ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ನೀಡಿದ ಮಂಡ್ಯದ ಜನತೆಗೆ ಋಣಿಯಾಗಿರುವುದಾಗಿ ಹೇಳಿದರು. ಅಲ್ಲದೆ ಕೊನೇ ಕ್ಷಣದವರೆಗೂ ತಮಗಾಗಿ ಬಿ ಫಾರಂ ಮೀಸಲಿಟ್ಟಿದ್ದಕ್ಕೆ ಪಕ್ಷದ
ನಾಯಕರಿಗೂ ಧನ್ಯವಾದ ಅರ್ಪಿಸಿದರು. “ನನಗೆ ವಯಸ್ಸಾಗಿದೆ, ಜನರ ಆಸೆ ತೀರಿಸಲು ಆಗುವುದಿಲ್ಲವೆಂದು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ಸಂಪುಟದಿಂದ ಕೈ ಬಿಟ್ಟಾಗಲೇ ನನ್ನ ಶಕ್ತಿ ಏನೆಂದು ಗೊತ್ತಾಗಿತ್ತು. ಆ ಸಂದರ್ಭದಲ್ಲೇ ನಾನು ಈ ನಿರ್ಧಾರ ಮಾಡಿದ್ದೆ’ ಎಂದರು. “ಚುನಾವಣೆಯಲ್ಲಿ ಯಾರ ಪರವಾಗೂ ಪ್ರಚಾರ ಮಾಡಲ್ಲ. ಹಾಗಿದ್ದರೆ ನಾನೇ ಸ್ಪರ್ಧೆ ಮಾಡುತ್ತಿದ್ದೆ. ಪ್ರಚಾರಕ್ಕೆ
ಹೋಗಬೇಕಾಗುತ್ತದೆ ಎಂದು ನಾನು ಯಾರಿಗೂ ಟಿಕೆಟ್ ನೀಡುವಂತೆ ಸೂಚಿಸಿಲ್ಲ’ ಎಂದು ತಿಳಿಸಿದರು.
ಸಿದ್ದರಾಮಯ್ಯ ಬಗ್ಗೆ ಬೇಸರ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವಲ್ಲಿ ನನ್ನ ಪಾಲೂ ಇದೆ. ಕನಕದಾಸನನ್ನು ಕನಕ ರಾಜ ಮಾಡಿ ಎಂದು ಹೇಳಿದವನು ನಾನು. ಆದರೆ, ಈಗ ನನ್ನನ್ನು ದೂರ ಇಟ್ಟಿದ್ದಾರೆಂದು ಅಂಬರೀಶ್ ಬೇಸರ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಮ್ಮ ಮನೆಗೆ ಬಂದು ಮಂಡ್ಯದಲ್ಲಿ ಒಳ್ಳೆಯ ವಾತಾವರಣವಿಲ್ಲ. ನೀವು ಸೋಲುತ್ತೀರಾ ಎಂದು ಹೇಳಿದರು. ಆಗಲೇ ನನಗೆ ನೋವಾಯಿತು. 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ್ದು ಸರಿ ಕಾಣಲಿಲ್ಲ. ಮೊದಲಿನಿಂದಲೂ ಚಾಮುಂಡೇಶ್ವರಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿಕೊಂಡು ಬಂದಿದ್ದರು. ಮುಖ್ಯಮಂತ್ರಿಯಾಗಿದ್ದವರು ಚಾಮುಂಡೇಶ್ವರಿಯಿಂದ ಮಾತ್ರ ಸ್ಪರ್ಧಿಸಬೇಕಿತ್ತು. ಒಂದೇ ಕಡೆ ನಿಂತು ಧೈರ್ಯ ತೋರಿಸಬೇಕಿತ್ತು.
ಅಂಬರೀಶ್, ಶಾಸಕ, ನಟ
ಅಂಬರೀಶ್ ನಮ್ಮ ಪಕ್ಷದ ಹಿರಿಯ ನಾಯಕರು, ಮಂಡ್ಯ ಹಾಗೂ ರಾಜ್ಯದಲ್ಲಿ ಅವರದ್ದೇ ಆದ ವರ್ಚಸ್ಸಿದೆ. ನಾವು ಅವರಿಗೆ ಗೌರವ ಕೊಡುತ್ತೇವೆ. ಅವರ ನಿರ್ಧಾರಕ್ಕೆ ಬೆಲೆ ಕೊಟ್ಟು ಬೇರೆ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ.
ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ಅಂಬರೀಶ್ ಮನೆಗೆ ಹೋದಾಗ ಖಾಸಗಿ ವಿಚಾರಗಳನ್ನು ಮಾತನಾಡಿದ್ದೇನೆ. ಅವರು ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವುದು ನಮ್ಮ ಅಭಿಲಾಷೆಯಾಗಿತ್ತು. ನಾನು ಅವರಿಗೆ ಯಾವುದೇ ಸಮೀಕ್ಷೆ ಬಗ್ಗೆ ಹೇಳಿಲ್ಲ. ಖಾಸಗಿ ವಿಷಯ ಅವರು ಮಾಧ್ಯಮಗಳ ಮುಂದೆ
ಹೇಳಬಾರದಿತ್ತು.
● ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ