ಕೆಜಿಎಫ್: ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರು ಸಶಕ್ತರಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ಇತ್ತೀಚಿಗೆ ಓರ್ವ ಯುವಕನ ಕೊಲೆ ಹಾಗೂ ಲಾಂಗ್ ಹಿಡಿದು ದಾರಿ ಹೋಕರಿಗೆ ಭಯಹುಟ್ಟಿಸುತ್ತಿದ್ದ ಪ್ರಕರಣ ನಡೆದ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಐಜಿಪಿ ಮಾತನಾಡಿದರು.
ತಪ್ಪಿತಸ್ಥರ ಬಿಡುವುದಿಲ್ಲ: ರೌಡಿ ಚಟುವಟಿಕೆಗಳನ್ನು ನಿಗ್ರಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ತಪ್ಪು ಮಾಡಿದ ವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ.ಸಣ್ಣಪುಟ್ಟ ರೌಡಿ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಗೂಂಡಾ ಕಾಯಿದೆ ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಾಗಿಸುವುದು ಎಂದು ಐಜಿಪಿ ತಿಳಿಸಿದರು. ಡ್ರಗ್ಸ್ ಮಾರಾಟ ಜಾಲದ ಬಗ್ಗೆ ಕೂಡ ಇಲ್ಲಿನ ಪೊಲೀಸರು ಹದ್ದಿನಕಣ್ಣಿಟ್ಟಿದ್ದು, ಬೇರೆ ಜಿಲ್ಲೆಗಳು ಮತ್ತು ಬೆಂಗಳೂರು ನಗರದ ಪೊಲೀಸರ ಜೊತೆ ಸಂಪರ್ಕದಲ್ಲಿದ್ದುಕೊಂಡು ಮಾಹಿತಿ ಪಡೆಯುತ್ತಿದ್ದಾರೆ. ಕೆಜಿಎಫ್ನ ಡ್ರಗ್ಸ್‌ಮಾರಾಟಗಾರ ಪಲ್‌ರಾಜ ಎಂಬಾತ ಪೊಲೀಸರ ಪಟ್ಟಿಯಲ್ಲಿದ್ದಾನೆ. ಕಾನೂನು ಕೈಗೆತ್ತಿಕೊಂಡವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಐಜಿಪಿ ಎಚ್ಚರಿಕೆ ನೀಡಿದರು.
ಲಾಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಎಡ್ವಿನ್ ನನ್ನು ಕೂಡ ಬಂಧಿಸಲಾಗಿದೆ ಎಂದ ಐಜಿಪಿ, ಸ್ಟಾನ್ಲಿ ಹತ್ಯೆಯಾದ ಸ್ಥಳ ಮತ್ತು ಸಲ್ಡಾನವೃತ್ತದಲ್ಲಿ ಎಡ್ವಿನ್ ಮತ್ತ ಸಹಚರರು ಲಾಂಗ್ ಹಿಡಿದು ಬೆದರಿಸಿದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್, ಡಿವೈಎಸ್ಪಿ ಬಿ.ಕೆ. ಉಮೇಶ್ ಸ್ಥಳದಲ್ಲಿದ್ದರು.