ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ ಕಳೆದ ಹಲವಾರು ದಶಕಗಳಿಂದ ಭಯೋತ್ಪಾದನೆ ದಾಳಿಯಿಂದ ನಲುಗಿಹೋಗಿದ್ದು, ಇದೀಗ ಕೇಂದ್ರಾಡಳಿತ ಪ್ರದೇಶದಲ್ಲಿ ಜನರು ಭಯದ ವಾತಾವರಣದಿಂದ ಹೊರಬರುತ್ತಿದ್ದಾರೆ. ಪ್ರಸ್ತುತ ಜಮ್ಮು-ಕಾಶ್ಮೀರದ ಇತ್ತೀಚೆಗಿನ ಬೆಳವಣಿಗೆ ಗಮನಿಸಿದರೆ ರಾಜ್ಯದಲ್ಲಿ ಭಯೋತ್ಪಾದನೆ ಕೊನೆಯುಸಿರೆಳೆದಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:INDvsNZ; ನಮ್ಮ ವಿರುದ್ಧ ಭಾರತೀಯ ಆಟಗಾರರು ಒತ್ತಡ ಅನುಭವಿಸುತ್ತಾರೆ: ಟ್ರೆಂಟ್ ಬೌಲ್ಟ್
ಕೇಂದ್ರಾಡಳಿತ ಪ್ರದೇಶದಲ್ಲಿ ಕಳೆದ ವರ್ಷ ಅಂದಾಜು 110 ಯುವಕರು ಉಗ್ರ ಸಂಘಟನೆಗೆ ಸೇರಿದ್ದು, ಈ ವರ್ಷ ಕೇವಲ ಸ್ಥಳೀಯ 10 ಯುವಕರು ಸೇರ್ಪಡೆಗೊಂಡಿದ್ದಾರೆ. 1980ರ ಕೊನೆಯಲ್ಲಿ ಭುಗಿಲೆದ್ದಿದ್ದ ಭಯೋತ್ಪಾದನೆಯ ಬಳಿಕ ಇದೀಗ ಮೊದಲ ಬಾರಿಗೆ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಯುವಕರು ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ರಾಜ್ಯದಲ್ಲಿ ಶಾಂತಿಯ ವಾತಾವರಣ ನೆಲೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಸಿಂಗ್ ವಿವರಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯುಸಿರೆಳೆದಿದೆ. ಜಮ್ಮು ಕಾಶ್ಮೀರ ಪೊಲೀಸರು ಸಂಪೂರ್ಣವಾಗಿ ಉಗ್ರರ ಬೇರನ್ನು ಕೊನೆಗೊಳಿಸಿದ್ದಾರೆ. ಈ ಮೂಲಕ ಕಾಶ್ಮೀರ ಕಣಿವೆ ಪ್ರದೇಶದಲ್ಲಿನ ಶಾಂತಿಯುತ ವಾತಾವರಣದ ಕನಸನ್ನು ನಿಜವಾಗಿಸಿದ್ದಾರೆ ಎಂದು ಡಿಜಿಪಿ ಡಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಈಗಲೂ ಪ್ರಯತ್ನಿಸುತ್ತಿದೆ, ಆದರೆ ಜಮ್ಮು ಕಾಶ್ಮೀರ ಪೊಲೀಸರು ಅಂತಹ ಯತ್ನಗಳು ಯಶಸ್ವಿಯಾಗಲು ಅವಕಾಶ ನೀಡಿಲ್ಲ ಎಂದು ಡಿಜಿಪಿ ಹೇಳಿದರು.
ಕಳೆದ ಮೂರು ದಶಕಗಳಲ್ಲಿ ಸುಮಾರು 1,600ಕ್ಕೂ ಅಧಿಕ ಭದ್ರತಾ ಪಡೆ ಸಿಬಂದಿಗಳು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಲೇ ಇದೆ. ಆದರೆ ಭದ್ರತಾ ಪಡೆಯ ತ್ಯಾಗ, ಬಲಿದಾನ ನಿರರ್ಥಕವಾಗದೇ ಕಣಿವೆ ಪ್ರದೇಶದಲ್ಲಿ ಭಯೋತ್ಪಾದನೆ ಅಂತ್ಯಗೊಳ್ಳುವಂತಾಗಿದೆ.