ಹೊಸದಿಲ್ಲಿ : ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವುದಕ್ಕೆ ಪರ್ಯಾಪ್ತ ಸಾಕ್ಷ್ಯಾಧಾರಗಳು ಇದ್ದುದರಿಂದಲೇ ಭೀಮಾ-ಕೋರೇಗಾಂವ್ ಹಿಂಸೆಗೆ ಸಂಬಂಧಪಟ್ಟು ಐವರು ಮಾನವ ಹಕ್ಕು ಕಾರ್ಯಕರ್ತರನ್ನು ತಾನು ಬಂಧಿಸಿದ್ದುದಾಗಿ ಮಹಾರಾಷ್ಟ್ರ ಪೊಲೀಸ್ ಇಂದು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತನ್ನ ಉತ್ತರವನ್ನು ದಾಖಲಿಸಿತು.
ಬಂಧಿತ ಆರೋಪಿಗಳು ಹಿಂಸೆ ನಡೆಸುವ, ದೇಶದ ಮತ್ತು ಭದ್ರತಾ ಪಡೆಗಳ ವಿರುದ್ಧ ಹೊಂಚು ದಾಳಿಯನ್ನು ಆಯೋಜಿಸುವ ಸಂಚನ್ನು ಕೂಡ ನಡೆಸುತ್ತಿದ್ದರು ಎಂದು ಮಹಾರಾಷ್ಟ್ರ ಪೊಲೀಸರು ತಮ್ಮ ಉತ್ತರದಲ್ಲಿ ಹೇಳಿದ್ದಾರೆ.
“ಮಾನವ ಹಕ್ಕು ಕಾರ್ಯಕರ್ತರನ್ನು ನಾವು ಬಂಧಿಸಿರುವುದು ಅವರಲ್ಲಿನ ಭಿನ್ನಮತದ ಅಭಿವ್ಯಕ್ತಿಗಾಗಿ ಅಲ್ಲ; ಮಾವೋವಾದಿಗಳೊಂದಿಗೆ ಅವರು ನಂಟು ಹೊಂದಿರುವ ಬಗ್ಗೆ ಪರ್ಯಾಪ್ತ ಪುರಾವೆಗಳು ದೊರಕಿದ ಕಾರಣಕ್ಕೇ ನಾವು ಅವರನ್ನು ಬಂಧಿಸಿದ್ದೆವು’ ಎಂದು ಪೊಲೀಸರು ಹೇಳಿದ್ದರು.
2017ರ ಡಿ.31ರಂದು ಎಲ್ಗಾರ್ ಪರಿಷತ್ ನಡೆದ ಬಳಿಕ ಭೀಮಾ ಕೋರೇಗಾಂವ್ ಗ್ರಾಮದಲ್ಲಿ ಹಿಂಸೆ ನ್ಪೋಟಿಸಿದ್ದನ್ನು ಅನುಸರಿಸಿ ಎಫ್ಐಆರ್ ದಾಖಲಾಗಿದ್ದುದರ ಪ್ರಕಾರ, ಸರಿಯಾದ ಸಾಕ್ಷ್ಯಾಧಾರಗಳ ಬಲದಲ್ಲಿ ಮಾನವ ಹಕ್ಕು ಕಾರ್ಯಕರ್ತರಾದ ವರವರ ರಾವ್, ಅರುಣ್ ಫರೇರಾ, ವರ್ನನ್ ಗೊನ್ಸಾಲ್ವಿಸ್, ಸುಧಾ ಭಾರದ್ವಾಜ್ ಮತ್ತು ಗೌತಮ್ ನವಲಾಖಾ ಅವರನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರನ್ನು ಸೆ.6ರ ವರೆಗೆ ಗೃಹ ಬಂಧನದಲ್ಲಿ ಇರಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್ 29ರಂದು ಆದೇಶಿಸಿದ್ದ ಸಂದರ್ಭದಲ್ಲಿ ” ಪ್ರಜಾಸತ್ತೆಯಲ್ಲಿ ಭಿನ್ನಮತದ ಅಭಿವ್ಯಕ್ತಿಯು ‘safety valve’ ನಂತೆ ಕೆಲಸ ಮಾಡುತ್ತದೆ ಎಂದು ಹೇಳಿತ್ತು.