ಪಾಕುರ್, ಜಾರ್ಖಂಡ್ : ಹಿಂದೂ ವಿರೋಧಿ ಹೇಳಿಕೆ ನೀಡಿದರೆಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರಿಗೆ ಬಿಜೆಪಿ ಯುವ ಮೋರ್ಚಾ ಮತ್ತು ಎಬಿವಿಪಿ ಕಾರ್ಯಕರ್ತರು ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ. ಮುಖ್ಯಮಂತ್ರಿ ರಘುಬರ್ ದಾಸ್ ಅವರು ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಸ್ವಾಮಿ ಅಗ್ನಿವೇಶ್ ಅವರು ಜಿಲ್ಲೆಯ ಲಿತ್ತಿಪಾರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಪಾಕುರ್ ಗೆ ಬಂದಿದ್ದರು.
“ನಾನು ಕಾರ್ಯಕ್ರಮದ ಸ್ಥಳದಿಂದ ಹೊರ ಬರುತ್ತಿದ್ದಂತೆಯೇ ಬಿಜೆವೈಎಂ ಮತ್ತು ಎಬಿವಿಪಿ ಕಾರ್ಯಕರ್ತರು ಅಪ್ರಚೋದಿತರಾಗಿ ನನ್ನ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದರು. ನಾನು ಹಿಂದೂ ವಿರೋಧಿ ಭಾಷಣ ಮಾಡಿರುವುದಾಗಿ ಅವರು ಆರೋಪಿಸಿದರು. ಜಾರ್ಖಂಡ್ ಒಂದು ಶಾಂತಿಯುತ ರಾಜ್ಯವೆಂದು ನಾನು ಈ ವರೆಗೆ ತಿಳಿದಿದ್ದೆ; ಆದರೆ ಈ ಘಟನೆಯು ರಾಜ್ಯದ ಬಗೆಗಿನ ನನ್ನ ಅಭಿಪ್ರಾಯವನ್ನು ಬದಲಿಸುವಂತೆ ಮಾಡಿದೆ’ ಎಂದು ಸ್ವಾಮಿ ಅಗ್ನಿವೇಶ್ ಹೇಳಿದರು.
ಈ ಘಟನೆಯ ವಿಡಿಯೋ ಚಿತ್ರಿಕೆಯಲ್ಲಿ ಕಂಡು ಬರುವಂತೆ ಸ್ವಾಮಿ ಅಗ್ನಿವೇಶ್ ಮತ್ತು ಅವರ ಬೆಂಬಲಿಗರ ಮೇಲೆ ಭಾರೀ ದೊಡ್ಡ ಉದ್ರಿಕ್ತ ಗುಂಪೊಂದು ದಾಳಿ ಮಾಡುತ್ತಿರುವುದು ಕಂಡು ಬಂದಿದೆ.
ದಾಳಿಕೋರರು ಮೊದಲು ಘೋಷಣೆಗಳನ್ನು ಕೂಗಿದ್ದಾರೆ; ಕಪ್ಪು ಬಾವುಟ ತೋರಿಸಿದ್ದಾರೆ; ಅನಂತರ ಅವರು ಅಗ್ನಿವೇಶ್ ಅವರನ್ನು ಹೊಡೆದು ಹಲ್ಲೆ ಮಾಡಿ ನೆಲಕ್ಕೆ ಬೀಳಿಸಿದ್ದಾರೆ; ಅಗ್ನಿವೇಶ್ ಅವರ ಜತೆಗಾರರು ಹಲ್ಲೆಯನ್ನು ತಡೆಯಲು ಅವರಿಗೆ ರಕ್ಷಣೆ ನೀಡಲು ಯತ್ನಿಸಿದ ಹೊರತಾಗಿಯೂ ಈ ಹಿಂಸಾ ಕೃತ್ಯ ನಡೆದುಹೋಗಿದೆ. ಪೊಲೀಸರು ಸುಮಾರು 20 ದಾಳಿಕೋರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತಪ್ಪು ಗಾರರನ್ನು ನಾವು ಖಂಡಿತ ಬಿಡುವುದಿಲ್ಲ ಎಂದು ಪಾಕುರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ. ಆದರೆ ಪೊಲೀಸ್ ಸುಪರಿಂಟೆಂಡೆಂಟ್ ಶೈಲೇಂದ್ರ ಪ್ರಸಾದ್ ಬುರ್ನ್ವಾಲಾ ಅವರು “ಜಿಲ್ಲೆಯಲ್ಲಿ ಅಗ್ನಿವೇಶ್ ಕಾರ್ಯಕ್ರಮ ಇದೆ ಎಂಬ ಬಗ್ಗೆ ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ’ ಎಂದು ಹೇಳಿದ್ದಾರೆ.