ಕೊಚ್ಚಿ: ಶಬರಿ ಮಲೆ ಸನ್ನಿಧಾನ ಪ್ರವೇಶಿಸಲು ಯತ್ನಿಸಿದ ಸಾಮಾಜಿಕ ಕಾರ್ಯಕರ್ತೆ ರೆಹಮಾ ಫಾತಿಮಾ ಅವರ ಕೊಚ್ಚಿಯಲ್ಲಿರುವ ಮನೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಅವರು ಶಬರಿಮಲೆಗೆ ತಮ್ಮ ಸಂಗಾತಿಯೊಂದಿಗೆ ತೆರಳಿದ್ದರು. ಅವರು ಶಬರಿಮಲೆಗೆ ತೆರಳಿರುವ ವಿಡಿಯೋಗಳು ವಾಹಿನಿಗಳಲ್ಲಿ ದಿನವಿಡೀ ಪ್ರಸಾರಗೊಂಡಿದ್ದವು. ಸಂಜೆ ವೇಳೆ, ಕೊಚ್ಚಿಯಲ್ಲಿರುವ ಮನೆಯ ಮೇಲೆ ಕೆಲ ಯುವಕರ ತಂಡ ದಾಳಿ ನಡೆಸಿದೆ. ವಿಷಯ ತಿಳಿದ ಪೊಲೀಸರು ಮನೆಗೆ ಧಾವಿಸುವಷ್ಟರಲ್ಲಿ ದಾಳಿ ನಡೆಸಿದ ಯುವಕರ ಗುಂಪು ಜಾಗ ಖಾಲಿ ಮಾಡಿತ್ತು.
ಮೇಲ್ಮನವಿಗೆ ಸಂಪಾದಕಿ ನಿರ್ಧಾರ: ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೇರಳ ಸರಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಮಲಯಾಳಂ ಸುದ್ದಿ ಜಾಲತಾಣವೊಂದರ ಸಂಪಾದಕಿ ಸಿ.ಎಸ್.ಲಿಬಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.
ಕೇಂದ್ರದಿಂದ ಸೂಚನೆ: ದಿನಕಳೆದಂತೆ ಶಬರಿಮಲೆಯಲ್ಲಿ ವಾತಾವರಣ ಉದ್ವಿಗ್ನವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯ ಸರಕಾರಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ. ಈ ಮೂರೂ ರಾಜ್ಯಗಳಲ್ಲಿ ಶಬರಿಮಲೆಯ ಅಪಾರ ಭಕ್ತರು ಇರುವ ಹಿನ್ನೆಲೆಯಲ್ಲಿ ಶಬರಿಮಲೆಯ ಬಿಸಿ ಈ ರಾಜ್ಯಗಳಿಗೆ ತಟ್ಟ ದಿರುವಂತೆ ಕಾನೂನು ಸುವ್ಯವಸ್ಥೆ ಪಾಲಿಸ ಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶಗಳು ರವಾನೆ ಯಾಗದಂತೆ ಎಚ್ಚರ ವಹಿಸಬೇಕು ಎಂದು ಕೇಂದ್ರ ಸೂಚಿಸಿದೆ.
ದೇಗುಲ ಶುದ್ಧಗೊಳಿಸಿ
ಯಾವುದೇ ಮಹಿಳೆ ಅಯ್ಯಪ್ಪ ಸ್ವಾಮಿ ಸನ್ನಿಧಾನದೊಳಕ್ಕೆ ಕಾಲಿಟ್ಟರೆ, ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಪದ್ಧತಿಗೆ ಚ್ಯುತಿಯಾದರೆ ಕೂಡಲೇ ದೇಗುಲವನ್ನು ಮುಚ್ಚಬೇಕು ಹಾಗೂ ಇಡೀ ದೇವಾಲಯವನ್ನು ಶುದ್ಧಗೊಳಿಸ ಬೇಕು ಎಂದು ಅಯ್ಯಪ್ಪ ಸ್ವಾಮಿಯ ಆಡಳಿತಾಧಿಕಾರಿಗಳಿಗೆ ಪಂದಳಂ ಅರಮನೆಯ ಟ್ರಸ್ಟ್ ಪತ್ರ ಬರೆದಿದೆ.
ಹಿಂದುತ್ವ ವಾದಿಗಳು ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಏನು ಮಾಡಿದ್ದವೋ, ಅದನ್ನೇ ಈಗ ಶಬರಿಮಲೆ ವಿಚಾರದಲ್ಲೂ ಮಾಡುತ್ತಿವೆ.
ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ