ಬಾಗಲಕೋಟೆ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಬಸವೇಶ್ವರ ವೃತ್ತದಲ್ಲಿ ಬೈಕ್, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿ, ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಪೆಟ್ರೋಲ್, ಡಿಸೇಲ್ ಬೆಲೆ ನಿತ್ಯವೂ ಏರಿಕೆಯಾಗುತ್ತಿದೆ. ಇದರಿಂದ ಸಾಮಾನ್ಯ ಜನರು ದಿನ ಬಳಕೆಯ ವಸ್ತುಗಳು ಖರೀದಿ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗೆ ಅಚ್ಚೇ ದಿನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಬಿಜೆಪಿಯವರು, ಬಡ ಬದುಕನ್ನೇ ಕಸಿದುಕೊಂಡಿದೆ. ದೇಶದಲ್ಲಿ ಬಡವರು ಬದುಕುವ ಅರ್ಹತೆಯೇ ಇಲ್ಲವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಭಾರತ ದೇಶ ಸರ್ವ ಜಾತಿ-ಜನಾಂಗದ ಶಾಂತಿಯ ತೋಟವೆಂದು ಹಿರಿಯರು ಹೇಳಿದ್ದಾರೆ. ಎಲ್ಲ ಜಾತಿ-ಧರ್ಮದವರು ಸಹೋದರತೆಯಿಂದ ಬಾಳುತ್ತಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜಾತಿ, ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದೆ. ಇದು ಸಮಾಜಕ್ಕೆ ಮಾರಕವಾಗಲಿದೆ. ಬೆಲೆ ಏರಿಕೆಯಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಜಾತಿ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಲ್ಲಾಟವಾಡುತ್ತಿದೆ. ಇಂತಹ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಬಿಜೆಪಿ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಇದು ಜನಸಾ ಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರಿಗೆ ವಂಚನೆ ಮಾಡುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತಾರೆ. ತೈಲ ಬೆಲೆ, ಗ್ಯಾಸ್ ಬೆಲೆ ಸೇರಿದಂತೆ ಜನರಿಗೆ ಬೇಕಾಗುವಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಜನರು ಜೀವನ ಸಾಗಿಸುವುದು ದುಸ್ತರವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ನಾಗರಾಜ ಹದ್ಲಿ ಮಾತನಾಡಿ, ಹಿಂದೂ-ಮುಸ್ಲಿಂ ಬಾಂಧವರ ಮಧ್ಯೆ ವೈಮನಸ್ಸು ಉಂಟು ಮಾಡುವುದೇ ಬಿಜೆಪಿ ಸರ್ಕಾರದ ಉದ್ದೇಶವಾಗಿದೆ. ಪರಸ್ಪರ ಸಹೋದರತೆ ಭಾವನೆಯಿಂದ ಬದುಕಬೇಕಿರುವ ಜನರ ಮಧ್ಯೆ ವೈಮನಸ್ಸು ಹುಟ್ಟು ಹಾಕಿ, ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಬಿಸಿ ಮರೆಮಾಚಲು ಈ ರೀತಿ ತುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಬಲರಾಮ ರಾಠೊಡ, ಚಂದ್ರಶೇಖರ ರಾಠೊಡ, ಸಂಜೀವ ವಾಡ್ಕರ, ರಾಜು ಮನ್ನಿಕೇರಿ, ಎಸ್.ಎನ್. ರಾಂಪುರ, ಭರತಕುಮಾರ ಈಟಿ, ಮುತ್ತು ಜೋಳದ, ಸಿದ್ದಣ್ಣ ಗೋಡಿ, ಮಂಜುಳಾ ಭೂಸಾರೆ ಪಾಲ್ಗೊಂಡಿದ್ದರು.