Advertisement
ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಮಾತನಾಡಿ, ನೀವು ಉಸ್ತುವಾರಿ ವಹಿಸಿಕೊಂಡಾಗಿನಿಂದ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅನುಪಾಲನಾ ವರದಿಗಳು ಜಾರಿಯಾಗುತ್ತಿಲ್ಲ. ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದೆ. 40 ಟನ್ ಮರಳು ತುಂಬಿದ ಲಾರಿಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದರು.
Related Articles
Advertisement
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಸಿರವಾರ ಮತ್ತು ಮಾನ್ವಿ ತಾಲೂಕುಗಳ ಕೊನೆ ಭಾಗಕ್ಕೆ ನೀರು ತಲುಪುತ್ತಿಲ್ಲ. ಬೆಳೆಗಳು ಒಣಗುತ್ತಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಉಪ ಮುಖ್ಯಮಂತ್ರಿ ಏನಾದರೂ ಮಾಡಿ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಸಚಿವ ಪ್ರತಿಕ್ರಿಯಿಸಿ ಟಿಎಲ್‌ಬಿಸಿ 69 ಮೈಲಿಗೆ ನೀರು ತಲುಪಿಸಬೇಕಿದೆ. ಹೊಸಪೇಟೆಯಲ್ಲಿ ರವಿವಾರ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜತೆ ಸಭೆ ಮಾಡಿದ್ದೇವೆ. ಅಧಿ ಕಾರಿಗಳು ಕಾಲುವೆ ಪರಿಶೀಲಿಸದ ಕಾರಣ ಸಮಸ್ಯೆ ಉದ್ಭವ ಆಗುತ್ತಿದೆ. ಅನಗತ್ಯ ನೀರು ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ಭದ್ರಾದಿಂದ 4 ಟಿಎಂಸಿ ನೀರು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬೆಳೆ ಒಣಗಲು ಬಿಡಬಾರದು ಎಂದರು.
ಅನುಪಾಲನಾ ವರದಿ ಪ್ರಸ್ತಾಪಿಸಿದ ಎಸಿ ಸಂತೋಷ ಕಾಮಗೌಡ, ವಿವಿಧ ಪುನರ್ವಸತಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು.ಗ್ರಾಮೀಣ ಶಾಸಕ ದದ್ದಲ್ ಮಾತನಾಡಿ, ಗುರ್ಜಾಪುರ ಗ್ರಾಮದ ಸ್ಥಳಾಂತರ ಕೆಲಸ ಇನ್ನೂ ಶುರುವಾಗಿಲ್ಲ. ಪ್ರತಿ ವರ್ಷ ಇದೇ ನೆಪ ಹೇಳುತ್ತ ಸಾಗಬೇಕೆ ಎಂದರು. ಸ್ಥಳಾಂತರಿಸುವ ಗ್ರಾಮಗಳಿಗೆ ಸಂಬಂಧಿಸಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿಸಿ ಎಂದು ತಾಕೀತು ಮಾಡಿದರು. ಸಿಇಒ ಶೇಖ್ ಆಸೀಫ್ ಮಾತನಾಡಿ, ರಸ್ತೆ ಜಂಗಲ್ ಕಟಿಂಗ್ ಕೆಲಸ ಮಾಡಲು, ಸ್ಥಳಾಂತರವಾಗುವ ಗ್ರಾಮಗಳಲ್ಲಿ ಕೆಲಸ ಆರಂಭಿಸಲು ತಿಳಿಸಲಾಗುವುದು ಎಂದರು. ಶಾಸಕ ಕೆ. ಶಿವನಗೌಡ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ವೇಗ ಕಡಿಮೆಯಾಗಿದೆ ಎಂದರು. ಈ ವೇಳೆ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.