Advertisement

ಸರಕು ಸಾಗಣೆ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ದರೆ ಕ್ರಮ

10:59 PM Aug 23, 2019 | Lakshmi GovindaRaj |

ಬೆಂಗಳೂರು: ಸರಕು ಸಾಗಣೆ ವಾಹನದಲ್ಲಿ ಶಾಲಾ ಮಕ್ಕಳನ್ನು ಸಾಗಾಟ ಮಾಡಿದರೆ ಸೂಕ್ತ ಕ್ರಮ ಜರುಗಿಸಲು ರಾಜ್ಯಾದ್ಯಂತ ಪೊಲೀಸ್‌, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಶಿಕ್ಷಣ ಇಲಾಖೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

Advertisement

ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ವಿಫ‌ಲವಾಗಿದ್ದು, ಮೋಟಾರು ವಾಹನ ಕಾಯ್ದೆ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇದರಿಂದಾಗಿ ಪ್ರಯಾಣಿಕರು ಸುರಕ್ಷಿತವಾಗಿ ಸಂಚರಿಸಲು ಆಗುತ್ತಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲಾ ಮಕ್ಕಳನ್ನು ಸಭೆ ಸಮಾರಂಭ, ಕ್ರೀಡಾಕೂಟ ಮತ್ತು ಶಾಲೆಗಳಿಗೆ ಸರಕು ಸಾಗಾಟ ವಾಹನಗಳಲ್ಲಿ ಕರೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ರೀತಿಯ ಪ್ರಕರಣಗಳು ಎಲ್ಲೇ ಕಂಡುಬಂದರೂ ಜಿಲ್ಲಾ ಶಿಕ್ಷಣ ನಿಯಂತ್ರಣಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿ, ಪ್ರಾಧಿಕಾರ ನೀಡುವ ಆದೇಶದ ಅನ್ವಯ ಕ್ರಮ ಜರುಗಿಸಲು ಸೂಚಿಸಲಾಗಿದೆ.

ಇನ್ನು ಶಾಲಾ ಮಕ್ಕಳನ್ನು ಸರಕು ಸಾಗಾಟ ವಾಹನಗಳಲ್ಲಿ ಶಾಲೆಗಳಿಗೆ ಕರೆದುಕೊಂಡು ಬರುವುದು ಗಮನಕ್ಕೆ ಬಂದರೆ, ಜಿಲ್ಲಾ ವ್ಯಾಪ್ತಿಯ ಶಿಕ್ಷಣ, ಕಾರ್ಮಿಕ ಮತ್ತು ಪೊಲೀಸ್‌ ಇಲಾಖೆಗಳು ತಕ್ಷಣ ಕ್ರಮ ಜರುಗಿಸುವಂತೆ, ನಿಯಮ ಉಲ್ಲಂಘನೆ ಕಂಡುಬಂದರೆ ಶಾಲಾ ಆಡಳಿತ ಮಂಡಳಿ ವಿರುದ್ದ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಲಾಗಿದೆ.

ಶಿಫಾರಸುಗಳು
-ದೂರದ ಊರುಗಳಿಂದ ಶಾಲೆಗಳಿಗೆ ಬರುವ ಮಕ್ಕಳಿಗೆ ಕಡ್ಡಾಯವಾಗಿ ವಾಹನ ಸೌಲಭ್ಯ ಕಲ್ಪಿಸಬೇಕು.

Advertisement

-ಶಾಲಾ ಮಕ್ಕಳಿಗೆ ನೀಡುತ್ತಿರುವ ರಿಯಾಯಿತಿ ದರದ ಕೆಎಸ್‌ಆರ್‌ಟಿಸಿ ಬಸ್‌ ಪಾಸ್‌ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಸೂಚಿಸಬೇಕು.

-ಸರ್ಕಾರಿ ಸಾರಿಗೆ ಸಂಸ್ಥೆಗಳು ಶಾಲಾ ಮಕ್ಕಳ ಸಾಗಣೆಗೆ ರಿಯಾಯಿತಿ ದರದಲ್ಲಿ ಒಪ್ಪಂದಕ್ಕೆ ಬಸ್‌ಗಳನ್ನು ನೀಡುತ್ತಿದ್ದು, ಸ್ವಂತ ಶಾಲಾ ಬಸ್‌ಗಳನ್ನು ಹೊಂದಿರದ ಶಾಲೆಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ.

-ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ತಿಳಿಸಬೇಕು.

-ಈ ನಿಯಮಗಳನ್ನು ಪಾಲಿಸದೆ ಯಾವುದೇ ಅನಾಹುತವಾದರೂ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.

ಯಾವುದೇ ಭಾಗದಲ್ಲಿ ಶಾಲೆಗಳು ನಿಯಮ ಗಳನ್ನು ಉಲ್ಲಂ ಸಿದ ಪ್ರಕರಣ ಕಂಡುಬಂದಲ್ಲಿ, ಆಯಾ ಜಿಲ್ಲೆಗಳ ಉಪನಿರ್ದೇಶಕರೇ ನಿಯಮಾನು ಸಾರ ಕ್ರಮ ಜರುಗಿಸಲು ಅವಕಾಶ ನೀಡಲಾಗಿದೆ.
-ಡಾ. ಕೆ.ಜಿ.ಜಗದೀಶ, ಸಾಶಿಇ ಆಯುಕ್ತರು

ನಿಯಮಗಳನ್ನು ಉಲ್ಲಂಘಿಸಿದರೆ ಯಾರಿಗೆ ದೂರು ನೀಡಬೇಕೆಂಬ ಸ್ಪಷ್ಟತೆ ಈವರೆಗೆ ಬಂದಿಲ್ಲ. ಹಾಗಾಗಿ ದೂರು ಎಲ್ಲಿಗೆ ನೀಡಬೇಕು ಎಂಬುದನ್ನು ಖಾತರಿಪಡಿಸಬೇಕಿದೆ. ನಂತರ ಪೋಷಕರು ಜಾಗೃತರಾಗಿ ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಾರೆ.
-ನಾಗಸಿಂಹ, ಶಿಕ್ಷಣ ತಜ್ಞ

ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ರಸ್ತೆಗಿಳಿದು ಸಾರಿಗೆ ವಾಹನಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡುವ ಸದುದ್ದೇಶ ಶಿಕ್ಷಣ ಇಲಾಖೆಗೆ ಇದ್ದರೆ ಆರ್‌ಟಿಒ ಅಥವಾ ಪೊಲೀಸ್‌ ಇಲಾಖೆಗೆ ಪತ್ರ ಬರೆದರೆ ಉತ್ತಮ.
-ಶಶಿಕುಮಾರ್‌, ಕ್ಯಾಮ್ಸ್‌ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next