ಹೊನ್ನಾಳಿ: ರಾಜ್ಯದ ಪೊಲೀಸ್ ಇಲಾಖೆ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ದಾವಣಗೆರೆಗೆ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಶಾಸಕ ಎಂ.ಪಿ. ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಆಧುನಿಕ ಎಫ್‌ಎಸ್‌ಎಲ್ ಲ್ಯಾಬ್ ಬಲಗೊಳಿಸುವ ಜತೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇಲಾಖೆಗೆ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನ ಒದಗಿಸಲಾಗುವುದು ಎಂದರು.
ಯಡಿಯೂರಪ್ಪ ನೇತೃತ್ವದ ಸರಕಾರಕ್ಕೂ ಮೊದಲು ರಾಜ್ಯದಲ್ಲಿ ಸುಮಾರು 33 ಸಾವಿರ ಪೊಲೀಸ್ ಹುದ್ದೆಗಳು ಖಾಲಿ ಇದ್ದವು. ಈ ಕೊರತೆಯನ್ನು ನೀಗಿಸುವ ಜತೆಗೆ ಇನ್ನೂ 4 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿ ಗೃಹ ಸಚಿವನಾಗಿ ಕಾನ್‌ಸ್ಟೆಬಲ್‌ಗಳನ್ನು ಸೇರಿಸಿ ಸುಮಾರು 2 ಗಂಟೆಗಳ ಕಾಲ ಸಂವಾದ ಕಾರ್ಯಕ್ರಮ ನಡೆಸಿದ್ದೇನೆ. ಅವರ ಬೇಕು-ಬೇಡಗಳಿಗೆ ಸ್ಪಂದಿಸಿದ್ದು, ಶೇ.49 ಪೊಲೀಸ್ ಸಿಬಂದಿಗೆ ಡಬ್ಬಲ್ ಬೆಡ್ ರೂಂ ಮನೆ ನಿರ್ಮಿಸಿ ಕೊಡಲಾಗಿದೆ ಎಂದರು.
ಸಿಬಂದಿ ನೆಮ್ಮದಿ ಮುಖ್ಯ:
ಪೊಲೀಸರು ನೆಮ್ಮದಿಯಿಂದ ಇದ್ದರೆ ಮಾತ್ರ ಅವರಿಂದ ಪರಿಣಾಮಕಾರಿ ಕೆಲಸ ಸಾಧ್ಯ. ಈ ನಿಟ್ಟಿನಲ್ಲಿ ಪೊಲೀಸರಿಗೆ ಸಾಧ್ಯವಿರುವ ಎಲ್ಲ ಸೌಲಭ್ಯ ನೀಡುವ ಮೂಲಕ ಸಮಾಜಕ್ಕೆ ಜನಸ್ನೇಹಿ ಪೊಲೀಸ್ ಠಾಣೆಗಳನ್ನು ನೀಡಲಾಗುತ್ತದೆ. ಜತೆಗೆ ಕ್ರಿಮಿನಲ್‌ಗಳಿಗೆ ಸಿಂಹ ಸ್ವಪ್ನವಾಗುವಂತಹ ಪೊಲೀಸ್ ವ್ಯವಸ್ಥೆ ನೀಡುತ್ತಿದ್ದೇವೆ. ಯುವ ಪೀಳಿಗೆಯಲ್ಲಿ ಗಾಂಜಾ, ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದೆ. ಇಂತಹ ಸಮಾಜಘಾತಕ ಪ್ರಕರಣಗಳನ್ನು ಯಾವುದೇ ಮುಲಾಜಿಲ್ಲದೆ ನಿಗ್ರಹಿಸಲು ಪೊಲೀಸ್ ಇಲಾಖೆ ಸಮರ್ಥವಾಗಿದೆ. ಹೆಣ್ಣು ಮಕ್ಕಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಅವರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು.