ಕಲಬುರಗಿ: ಅಫಜಲಪುರ ತಾಲೂಕಿನಲ್ಲಿ ಬರಗಾಲ ಎದುರಿಸಲು ಸಕಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ 92.02 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಹಿಂಗಾರು ಮತ್ತು ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ನದಿ, ಕರೆ, ಕಟ್ಟೆಗಳು ಬತ್ತಿ ಹೋಗಿವೆ. ಅಂತರ್ಜಲ ಕುಸಿತವಾಗಿದ್ದು, ಕೊಳವೆ ಬಾವಿಗಳಲ್ಲೂ ನೀರು ಸಿಗುತ್ತಿಲ್ಲ. ಹೀಗಾಗಿ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಉಜನಿ ಜಲಾಶಯದಿಂದ ನೀರು ಹರಿಸಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ಅಫಜಲಪುರ ಪಟ್ಟಣದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ನಾಲ್ಕೈದು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದ್ದರಿಂದ ಸೊನ್ನ ಬ್ಯಾರೇಜ್‌ನಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಅಲ್ಲದೇ, ಮಣ್ಣೂರದಲ್ಲಿ ಲಿಫ್ಟ್ ನಿರ್ಮಿಸಿ ಮಾಶಾಳ ಗ್ರಾಮದ ಮೂರು ಕೆರೆಗಳು, ಕರಜಗಿ ಗ್ರಾಮದ ಒಂದು ಕೆರೆ ತುಂಬಿಸುವ ಕಾಮಗಾರಿ, ಬಂದರವಾಡದಲ್ಲಿ ಲಿಫ್ಟ್ ನಿರ್ಮಿಸಿ ಬಿಸನೂರ, ಗೊಬ್ಬೂರ (ಬಿ), ಮೇಳಕುಂದಾ ಕೆರೆಗಳನ್ನು ತುಂಬಿಸಲು 68 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲ್ಲೂರ-ಚಿನಮಳ್ಳಿ ಗ್ರಾಮದಲ್ಲಿನ ಬ್ರಿಡ್ಜ್ ಕಂ ಬ್ಯಾರೇಜ್ ಕುಸಿದಿದ್ದು, 66 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಹಾಗೂ ಹೊಸ ಹೈಡ್ರೋಲಿಕ್ ಗೇಟ್ ಅಳವಡಿಸಲು ಟೆಂಡರ್ ಆಗಿದೆ. ಘತ್ತರಗಾ, ಫಿರೋಜಾಬಾದ್ ಬ್ಯಾರೇಜ್ ನವೀಕರಣಕ್ಕೂ ಯೋಜಿಸಲಾಗಿದೆ. ಅಫಲಜಪುರ ಮತಕ್ಷೇತ್ರಕ್ಕೆ ಪ್ರಸಕ್ತ ವರ್ಷ ಎಚ್‌ಕೆಆರ್‌ಡಿಬಿಯಿಂದ 56 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಅಪೆಂಡಿಕ್ಸ್-ಸಿ ಪಿಡಬ್ಲ್ಯೂಡಿ ಇಲಾಖೆಯಿಂದ 30 ಕೋಟಿ ರೂ. ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿದೆ. ಪಂಚಾಯಿತಿ ಇಲಾಖೆಗೆ 21.05 ಕೋಟಿ ರೂ. ಸಿಎಂ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದರು.
ದೇವಲ ಗಾಣಗಾಪುರ ದತ್ತಾತ್ರೇಯ ದೇಗುಲ ಔದುಂಬರ ಮಠಕ್ಕೆ ತಡೆಗೋಡೆ, ಮೇಲ್ಛಾವಣಿ ನಿರ್ಮಾಣಕ್ಕೆ 5ಕೋಟಿ ಮಂಜೂರಾಗಿದೆ ಎಂದರು.
56 ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ತೀವ್ರ ಬರಗಾಲದಿಂದ ಅಫಜಲಪುರ ತಾಲೂಕಿನ 56 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಭೀಮಾ ನದಿ ಬತ್ತಿದ್ದರಿಂದ ಪಟ್ಟಣದಲ್ಲೂ ನೀರಿಗೆ ಹಾಹಾಕಾರ ಶುರುವಾಗಿದೆ. ಅಲ್ಲದೇ, ಆರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಅದರೆ, ಜಾನುವಾರುಗಳಿಗೆ ಇನ್ನು ಎರಡೂಮೂರು ತಿಂಗಳು ಮೇವಿನ ಕೊರತೆ ಇಲ್ಲ.
ಎಂ.ವೈ .ಪಾಟೀಲ, ಶಾಸಕರು, ಅಫಜಲಪುರ