ಗೋಕಾಕ: ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಿಡಕಲ್ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು, ಈಗಾಗಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಿದ್ದರಿಂದ ನದಿ ತೀರದ ಗ್ರಾಮಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಟ್ಟು 72,800 ಕ್ಯೂಸೆಕ್ ನೀರು ಬರುತ್ತಿದ್ದರಿಂದ ನದಿ ತೀರದ ಗ್ರಾಮಗಳ ಸಾರ್ವಜನಿಕರಿಗೆ ಮುಂಜಾಗ್ರತವಾಗಿ ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ನದಿ ತೀರದ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗಾಗಿ ಟೀಂ ಎನ್‌ಎಸ್‌ಎಫ್, ನೋಡಲ್ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಘಟಪ್ರಭಾ ನದಿಗೆ ನೀರು ಸಹ ಕಡಿಮೆಯಾಗುತ್ತದೆ. ಅಲ್ಲದೇ ಅಗತ್ಯ ಬಿದ್ದರೆ ಸಾರ್ವಜನಿಕರನ್ನು ಸುರಕ್ಷತಾ ಸ್ಥಳಗಳಿಗೆ ಕರೆದೊಯ್ಯಲು ಈಗಾಗಲೇ 2 ಬೋಟುಗಳ ವ್ಯವಸ್ಥೆ ಮಾಡಲಾಗಿದ್ದು, ಇನ್ನೆರಡು ಬೋಟುಗಳನ್ನು ಸಾರ್ವಜನಿಕರ ಸುರಕ್ಷತೆಗಾಗಿ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಘಟಪ್ರಭಾ ನದಿಯಿಂದ 2.20 ಲಕ್ಷ ಕ್ಯೂಸೆಕ್ಸ್ ನೀರು ಬಂದಿದ್ದರಿಂದ ನದಿ ತೀರದ 29 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದವು. ನೂರಾರು ಕೋಟಿ ರೂ.ಗಳ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿತ್ತು ಎಂದು ಅವರು ಸ್ಮರಿಸಿದ್ದಾರೆ.
ಟೀಂ ಎನ್‌ಎಸ್‌ಎಫ್ ಈಗಾಗಲೇ ನದಿ ತೀರದ ಗ್ರಾಮಗಳಿಗೆ ತೆರಳಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಈ ತಂಡದ ಜೊತೆಯಲ್ಲಿ ಅಧಿಕಾರಿಗಳು ಸಹ ತೆರಳಿದ್ದಾರೆ. ಈಗಾಗಲೇ ನದಿಗೆ ನೀರು ಹರಿಯುತ್ತಿರುವುದರಿಂದ ಬೆಳಗಾವಿ, ವಿಜಯಪುರ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ ಎಂದು ಅವರು ಹೇಳಿದ್ದಾರೆ.
ಗಾಬರಿಯಾಗಬೇಡಿ: ಈಗಾಗಲೇ ಘಟಪ್ರಭಾ ನದಿಗೆ 72800 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರಿಂದ ಯಾರೂ ಆತಂಕಗೊಳ್ಳಬೇಡಿ. ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದಾಗಿನದಿ ತೀರದ ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದವು. ಇನ್ನೆರಡು ದಿನದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ನೀರಿನ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಮುಳುಗಡೆಯಾಗುವ ಯಾವುದೇ ಆತಂಕಗಳು ಸೃಷ್ಟಿಯಾಗುವುದಿಲ್ಲ. ಯಾವುದೇ ವದಂತಿಗಳಿಗೆ ನದಿ ತೀರದ ಗ್ರಾಮಗಳ ಸಾರ್ವಜನಿಕರು ಕಿವಿಗೊಡಬಾರದು. ನಿಮ್ಮೊಂದಿಗೆ ಸದಾ ನಾವಿದ್ದೇವೆ. ಸುಳ್ಳು ವದಂತಿಗಳಿಂದ ಗಾಬರಿಗೊಳ್ಳದೇ ಧೆ„ರ್ಯದಿಂದಿರಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.