ಕೆ.ಆರ್.ನಗರ: ತಾಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಸಂಬಂಧ ಅಧಿಕಾರಿಗಳ ಸಭೆ ಕರೆಯುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ³ ಬಳಿ ಚರ್ಚಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.
ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬುಧುವಾರ ತಾಲೂಕು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಬಗ್ಗೆ ಪಕ್ಷದ ಮುಖಂಡರು ನನ್ನ ಗಮನಕ್ಕೆ ತಂದಿದ್ದು, ಈ ವಿಚಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಸಭೆ: ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕೆ ಸರ್ಕಾರ ಈಗಾಗಲೇ ಅಧಿಕಾರಿಗಳು ಮತ್ತು ಆ ಭಾಗದ ಚುನಾಯಿತ ಜನಪ್ರತಿನಿಧಿಗಳ ಸಭೆ ನಡೆಸಿದ್ದು, ಆ ಮಾದರಿಯಲ್ಲಿ ಶೀಘ್ರದಲ್ಲಿಯೇ ಚುಂಚನಕಟ್ಟೆ ಕಾರ್ಖಾನೆಯ ಕಾರ್ಯಾರಂಭಕ್ಕೂ ಸಭೆ ನಡೆಸಲಾಗುವುದು. ದಸರಾ ಮುಗಿದ ನಂತರ ಮತ್ತೆ ಕೆ.ಆರ್.ನಗರಕ್ಕೆ ಭೇಟಿ ನೀಡಿ ಪೂರ್ಣ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದರು.
ಅರ್ಹರಿಗೆ ಸವಲತ್ತು ತಲುಪಿಸಿ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ವರ್ತಿಸಿ ಸರ್ಕಾರದ ಸವಲತ್ತುಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು. ಪರಸ್ಪರ ಕೆಸರೆರಚಿಕೊಳ್ಳದೇ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವುದರ ಜತೆಗೆ ಪಕ್ಷವೂ ಬೆಳೆಯುತ್ತದೆ ಎಂದು ಕಿವಿಮಾತು ಹೇಳಿದರು.
ಬೆಂಬಲ: ಬಿಜೆಪಿ ತಾಲೂಕು ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತನಾಡಿ, ಗ್ರಾಮೀಣ ದಸರಾ ಆಚರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಜಿಲ್ಲೆಯ ಪ್ರತಿ ತಾಲೂಕುಗಳಿಗೆ ಭೇಟಿ ನೀಡಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸುತ್ತಿರುವುದು ಶ್ಲಾಘನೀಯ.ಇಂತಹ ಉತ್ತಮ ಕೆಲಸ ಮಾಡುತ್ತಿರುವ ಸಚಿವರಿಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಕೆ.ಆರ್.ನಗರಕ್ಕೆ ಪ್ರಥಮ ಬಾರಿಗೆ ಆಗಮಿಸಿದ ವಿ.ಸೋಮಣ್ಣ ಅವರನ್ನು ತಾಲೂಕು ಬಿಜೆಪಿ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ, ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ವಕ್ತಾರ ಎಚ್.ಪಿ.ಗೋಪಾಲ್, ರಾಜ್ಯ ಪರಿಷತ್ ಸದಸ್ಯ ಎಚ್.ಡಿ.ಪ್ರಭಾಕರ್ ಜೈನ್, ತಾಲೂಕು ಉಪಾಧ್ಯಕ್ಷ ಜತ್ತಿ ಬಸವರಾಜು,
ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಪುರಸಭಾ ಸದಸ್ಯೆ ವೀಣಾ ವೃಷಭೇಂದ್ರ, ಮಾಜಿ ಸದಸ್ಯ ಪಿ.ಶಂಕರ್, ಬಿಜೆಪಿ ಮುಖಂಡರಾದ ಗೋಪಾಲರಾಜು, ಕಗ್ಗುಂಡಿಕುಮಾರ್, ಕುಪ್ಪೆ ಪ್ರಕಾಶ್, ಉಮಾಶಂಕರ್, ಮಾರ್ಕಂಡೇಯಸ್ವಾಮಿ, ತಮ್ಮಣ್ಣ, ತಿಲಕ್, ಚಿರಾಗ್‌ಪಟೇಲ್, ಆನಂದ, ಚಲುವರಾಜು, ಮಹದೇವ, ರಾಚಯ್ಯ, ಚಂದಗಾಲು ಸೋಮಶೇಖರ್ ಮತ್ತಿತರರು ಹಾಜರಿದ್ದರು.