ಚಿಕ್ಕಬಳ್ಳಾಪುರ: 1976ರ ಜೀತಗಾರಿಕೆ ಪದ್ಧತಿ ನಿರ್ಮೂಲನೆ ಕಾಯ್ದೆ ಅನ್ವಯ ಜಿಲ್ಲಾ ಜಾಗೃತಿ ಸಮಿತಿಯ ಪುನರ್ ರಚನೆ ಸಂಬಂಧ ಸದಸ್ಯರ ಆಯ್ಕೆಗಾಗಿ ಅರ್ಜಿ ಸಲ್ಲಿಸುವ ಅವಧಿ ಯನ್ನು ಫೆ.11ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 1976ರ ಜೀತಗಾರಿಕೆ ಪದ್ಧತಿ ನಿರ್ಮೂಲನೆ ಕಾಯ್ದೆ ಅನ್ವಯ ರಚಿತ ಆಗಿರುವ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಜಿಲ್ಲಾಡಳಿತ ಕಳೆದ ಅಕ್ಟೋಬರ್‌ನಲ್ಲಿ ಕಾಯ್ದೆ ಅನ್ವಯ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಎಲ್ಲಾ ಪ್ರವರ್ಗಗಳಲ್ಲಿ ಸದಸ್ಯರ ಆಯ್ಕೆಗಾಗಿ ಅರ್ಜಿಗಳು ಸಮರ್ಪಕ ವಾಗಿ ಸ್ವೀಕಾರ ಆಗಿಲ್ಲದ ಕಾರಣ ಫೆ.11ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರಂತೆ ಈ ಸಮಿತಿಯ ಸದಸ್ಯತ್ವದ ಆಯ್ಕೆ ಬಯಸುವವರಿಗೆ ಅರ್ಜಿ ಸಲ್ಲಿಸಲು ಫೆ.11ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.
ಈ ಸಮಿತಿಯ ಸದಸ್ಯತ್ವದ ಪ್ರವರ್ಗ, ಸದಸ್ಯರವಿವರ, ಪ್ರಾತಿನಿಧ್ಯ, ಸ್ಥಾನಮಾನ, ಸಲ್ಲಿಸಬೇಕಾಗಿರುವ ದಾಖಲೆಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಚೇರಿಯ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಫೆ.11ರ ಒಳಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್, ಜಿಲ್ಲಾ ಜಾಗೃತಿ ಸಮಿತಿ ಸಭೆಯ ಸದಸ್ಯರಾದ ರತ್ನಮ್ಮ, ಹನುಮಂತು, ನಾರಾಯಣಸ್ವಾಮಿ, ವಿ.ಗೋಪಾಲ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.