Advertisement

ವನ್ಯಜೀವಿ ಸಂಘರ್ಷ,ಕಳ್ಳಬೇಟೆ ತಡೆಗೆ ಕ್ರಮ: ಈಶ್ವರ ಖಂಡ್ರೆ

12:34 AM Mar 11, 2024 | Team Udayavani |

ಗುಂಡ್ಲುಪೇಟೆ: ವನ್ಯಜೀವಿ ಸಂಘರ್ಷ, ಕಳ್ಳಬೇಟೆ ತಡೆ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಒಗ್ಗೂಡಿ ಶ್ರಮಿಸಲು ತೀರ್ಮಾನಿಸಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Advertisement

ತಾಲೂಕಿನ ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ಸ್ವಾಗತ ಕೇಂದ್ರದ ಬಳಿ ನಿರ್ಮಿಸಲಾಗಿದ್ದ ಸಭಾಂಗಣದಲ್ಲಿ ಕೇರಳದ ಅರಣ್ಯ ಸಚಿವ ಎ.ಕೆ. ಶಶೀಂದ್ರನ್‌ ಜತೆಗೆ ಕರ್ನಾಟಕ, ಕೇರಳ ಹಾಗೂ ತಮಿಳು ನಾಡು ರಾಜ್ಯಗಳ ಅರಣ್ಯ ಇಲಾಖೆಯ ಉನ್ನತಾಧಿ ಕಾರಿಗಳ ಪ್ರಥಮ ಸಮ ನ್ವಯ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇಂದ್ರ ಸರಕಾರದ ಆದೇಶದನ್ವಯ ನಡೆಯುತ್ತಿರುವ ಸಭೆಯಲ್ಲ. ಬದಲಾಗಿ, ದಕ್ಷಿಣದ ಮೂರು ರಾಜ್ಯಗಳ ಕಳಕಳಿ ಮತ್ತು ಸ್ವಯಂ ಪ್ರಯತ್ನದ ಫ‌ಲವಾದ ಸಭೆಯಾಗಿದೆ ಎಂದು ತಿಳಿಸಿದರು.

ವನ್ಯಜೀವಿಗಳಿಂದ ಯಾವುದೇ ರಾಜ್ಯದಲ್ಲಿ ಅಮೂಲ್ಯ ಜೀವ ಅಥವಾ ಬೆಳೆ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಶೀಘ್ರದಲ್ಲೇ ಇದಕ್ಕೆ ಮೂರ್ತ ರೂಪ ನೀಡಲಾಗುವುದು. ಅರಣ್ಯ, ವನ್ಯಜೀವಿ ಸಂರಕ್ಷಣ ಕಾರ್ಯಕ್ರಮಗಳನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಮೂರೂ ರಾಜ್ಯಗಳು ಉತ್ತಮವಾಗಿ ಮಾಡುತ್ತಿವೆ. ಹೀಗಾಗಿಯೇ ಈ ಮೂರೂ ರಾಜ್ಯಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಪ್ರಯತ್ನಗಳನ್ನು ಮುಂದುವರಿಸುವುದು ನಿರ್ಣಾಯಕ ಎಂದು ಈಶ್ವರ ಖಂಡ್ರೆ ಹೇಳಿದರು.
ರಾಜ್ಯ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಸಹಿತ ಪ್ರಮುಖ ಅಧಿಕಾರಿಗಳಿದ್ದರು.

120 ಕಿ.ಮೀ. ರೈಲ್ವೇ ಬ್ಯಾರಿಕೇಡ್‌: ಖಂಡ್ರೆ
ಗುಂಡ್ಲುಪೇಟೆ: ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯಲು ರಾಜ್ಯದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ 120 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಟೆಂಡರ್‌ ಕೂಡ ಆಗಿದೆ. ಕೆಲವೆಡೆ ಕಾಮಗಾರಿ ನಡೆಯುತ್ತಿದೆ. ಆದಷ್ಟು ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಈಶ್ವರ್‌ ಖಂಡ್ರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next